ನಾಗ್ಪುರ(ಮಹಾರಾಷ್ಟ್ರ): ಸೋಲಾರ್ ಸ್ಪೋಟಕ ತಯಾರಿಕಾ ಕಂಪನಿಯಲ್ಲಿ ಇಂದು ಭಾರಿ ಸ್ಫೋಟ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಇಲ್ಲಿನ ಬಜಾರ್‌ಗಾಂವ್ ಪ್ರದೇಶದಲ್ಲಿನ ಸೋಲಾರ್ ಇಂಡಸ್ಟ್ರೀಸ್‌ನ ಕಾಸ್ಟ್ ಬೂಸ್ಟರ್ ಘಟಕದಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಯುವರಾಜ್ ಕಿಶನ್‌ಜಿ ಘರೋಡೆ, ಓಮೇಶ್ವರ ಕಿಶನ್‌ಲಾಲ್ ಮಚ್ಚಿರ್ಕೆ, ಮಿತಾ ಪ್ರಮೋದ ಉಯಿಕೆ, ಆರತಿ ನೀಲಕಂಠ ಸಹಾರೆ, ಶ್ವೇತಾಲಿ ದಾಮೋದರ ಮಾರ್ಬಾಟೆ, ಪುಷ್ಪಾ ಶ್ರೀರಾಮಜಿ ಮಾನ್‌ಪುರೆ, ಭಾಗ್ಯಶ್ರೀ ಸುಧಾಕರ ಲೋಣಾರೆ, ರುಮಿತಾ ವಿಲಾಸ್, ಮೋಸಮ್ ರಾಜ್‌ಕುಮಾರ್ ಪಾಟ್ಲೆ ಎಂದು ಗುರುತಿಸಲಾಗಿದೆ. ಮೃತರು ವಾರ್ಧಾ, ಚಂದ್ರಾಪುರ, ಅಮರಾವತಿ ಹಾಗೂ ನಾಗಪುರದ ನಿವಾಸಿಗಳು ಎಂದು ತಿಳಿದುಬಂದಿದೆ.
ತಲಾ 5 ಲಕ್ಷ ರೂ ಪರಿಹಾರ: ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಈ ಬಗ್ಗೆ ಗೃಹ ಸಚಿವ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದಾರೆ. ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 6 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಘಟನೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಮೃತರ ಕುಟುಂಬಸ್ಥರ ಜೊತೆಗೆ ಸರ್ಕಾರ ಇದೆ ಎಂದು ಹೇಳಿದ್ದಾರೆ.
ಇದು ರಕ್ಷಣಾ ಪಡೆಗಳಿಗೆ ಡ್ರೋನ್ ಮತ್ತು ಸ್ಪೋಟಕಗಳನ್ನು ತಯಾರಿಸುವ ಸಂಸ್ಥೆಯಾಗಿದೆ. ನಾಗಪುರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಧಿಕಾರಿಗಳು ಘಟನಾ ಸ್ಥಳದಲ್ಲೇ ಇದ್ದಾರೆ. ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಇದಕ್ಕೆ ಸಿಎಂ ಏಕನಾಥ್ ಶಿಂಧೆ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
2018ರಲ್ಲಿಯೂ ಈ ಸಂಸ್ಥೆಯಲ್ಲಿ ಸ್ಪೋಟ ಸಂಭವಿಸಿತ್ತು. ಈ ವೇಳೆ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಳಗಾವಿ: ಸಿಲಿಂಡರ್ ಸ್ಫೋಟ; 9 ತಿಂಗಳ ಮಗು ಸೇರಿ ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯ