ಮುಂಬೈ: ರೈತರ ಪ್ರತಿಭಟನೆಗೆ ಸಂಬಂಧ ವಿವಾದಾತ್ಮಕ 'ಟೂಲ್‌ಕಿಟ್' ಪ್ರಕರಣದಲ್ಲಿ ಭಾಗಿಯಾಗಿರುವ ಪರಿಸರ ಹೋರಾಟ ಕಾರ್ಯಕರ್ತೆ ನಿಕಿತಾ ಜಾಕೋಬ್, ಗಣರಾಜ್ಯೋತ್ಸವ ಮುನ್ನ ಝೂಮ್ ಮೀಟಿಂಗ್ ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಆ ಸಭೆಯಲ್ಲಿ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಸಂಸ್ಥಾಪಕ ಎಂ.ಒ.ಧಲಿವಾಲ್, ದಿಶಾ ರವಿ ಸೇರಿದಂತೆ ಇತರ ಸಹ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜಾಕೋಬ್ ಪರ ವಕೀಲರು ಮುಂಬೈ ಪೊಲೀಸರಿಗೆ ಸಲ್ಲಿಸಿದ ದಾಖಲೆಯಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯಲು 'ಟೂಲ್‌ಕಿಟ್' ಅನ್ನು ಎಕ್ಸ್ಟಂಕ್ಷನ್ ರೆಬೆಲಿಯನ್ (ಎಕ್ಸ್ಆರ್) ಇಂಡಿಯಾ ಸ್ವಯಂಸೇವಕರು ಸಿದ್ಧಪಡಿಸುತ್ತಿದ್ದಾರೆ ತಿಳಿಸಿದ್ದಾರೆ.
ಜಾಕೋಬ್ ಅವರು ಸ್ವೀಡಿಷ್ ಸಾಮಾಜಿಕ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಅವರೊಂದಿಗಿನ ಯಾವುದೇ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ದಾಖಲಾತಿಯು ಮಾಹಿತಿ ಚಿತ್ರಣ ಒಳಗೊಂಡಿತ್ತು. ಆದರೆ, ಯಾವುದೇ ಹಿಂಸಾಚಾರ ಪ್ರಚೋದಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದರು.
ಜಾಗೃತಿ ಮೂಡಿಸಲು ಟೂಲ್ಕಿಟ್ಗಳನ್ನು ಸಂಶೋಧಿಸಲು, ಚರ್ಚಿಸಲು, ಸಂಪಾದಿಸಲು ಮತ್ತು ಪ್ರಸಾರ ಮಾಡಲು ಯಾವುದೇ ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಉದ್ದೇಶ ಅಥವಾ ಕಾರ್ಯಸೂಚಿಯನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಲಿಸ್ತಾನ ಪರ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ ಸಂಸ್ಥಾಪಕ ಎಂ.ಒ.ಧಲಿವಾಲ್ ಅವರು ಗಣರಾಜ್ಯೋತ್ಸವದ ಮುನ್ನ ಟ್ವಿಟರ್‌ನಲ್ಲಿ ಸುದ್ದಿ ಹಬ್ಬಿಸಲು ಕಾರ್ಯಕರ್ತ ನಿಕಿತಾ ಜಾಕೋಬ್ ಅವರನ್ನು ಕೆನಡಾದ ಪ್ರಜೆಯಾದ ತನ್ನ ಸಹೋದ್ಯೋಗಿ ಪುನೀತ್ ಮೂಲಕ ಸಂಪರ್ಕಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸತತ 8ನೇ ದಿನವೂ ಜಿಗಿದ ಇಂಧನ ದರ: ಬೆಂಗಳೂರಲ್ಲಿ 100 ರೂ. ಗಡಿಯತ್ತ ಪೆಟ್ರೋಲ್!
ನಾಲ್ಕು ದಿನಗಳ ಹಿಂದೆ ಸ್ಪೆಷಲ್ ಸೆಲ್ ತಂಡವು ನಿಕಿತಾ ಜಾಕೋಬ್ ಅವರ ಮನೆಗೆ ತೆರಳಿ, ಅವರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಪರಿಶೀಲಿಸಿತು. ರೈತರ ಪ್ರತಿಭಟನೆಯಲ್ಲಿ ಟೂಲ್‌ಕಿಟ್ ದಾಖಲೆಯ ಸೂತ್ರೀಕರಣ ಮತ್ತು ಪ್ರಸಾರ ಸಂಬಂಧ 21 ವರ್ಷದ ದಿಶಾ ರವಿ ಅವರನ್ನು ಬೆಂಗಳೂರಲ್ಲಿ ಬಂಧಿಸಲಾಗಿತ್ತು. 'ಟೂಲ್‌ಕಿಟ್' ಡಾಕ್ಯುಮೆಂಟ್‌ನ ಸಂಪಾದಕರಲ್ಲಿ ಅವರು ಕೂಡ ಒಬ್ಬರು.
ದಿಶಾ ಅವರನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕಾರ್ಯಕರ್ತರಾದ ನಿಕಿತಾ ಜಾಕೋಬ್ ಮತ್ತು ಮಹಾರಾಷ್ಟ್ರದ ಬೀಡ್ ನಿವಾಸಿ ಶಾಂತನು ವಿರುದ್ಧ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದಾರೆ.