ನವದೆಹಲಿ : ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ 2ನೇ ಬಾರಿಗೆ ಗೆದ್ದು ಚಾಂಪಿಯನ್ ಆದ ನಿಖತ್ ಜರೀನ್, ತಾವು ಗೆದ್ದ ಬಹುಮಾನ ಹಣದಿಂದ ಮರ್ಸಿಡಿಸ್ ಕಾರು ಖರೀದಿಸುವುದಾಗಿ ಹೇಳಿದ್ದರು. ಆದರೆ ಈಗ ಆ ಯೋಜನೆಯನ್ನು ಕೈಬಿಟ್ಟಿದ್ದಾರೆ.
ಭಾನುವಾರ ಇಲ್ಲಿನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ನಿಖತ್ ಜರೀನ್ ಅವರು ವಿಯೆಟ್ನಾಂನ ಗುಯೆನ್ ಥಿ ಟಾಮ್‌ರನ್ನು 5-0 ರಿಂದ ಸೋಲಿಸಿ ಚಾಂಪಿಯನ್ ಆದರು. ಈ ಮೂಲಕ 1,00,000 ಯುಎಸ್ ಡಾಲರ್ ಬಹುಮಾನ ಹಣ ಗೆದ್ದರು. ಕ್ರೀಡಾಕೂಟದ ಪ್ರಾಯೋಜಕರಾದ ಮಹೀಂದ್ರಾ ಕಂಪನಿ ವಿಜೇತೆಗೆ ಥಾರ್ ಜೀಪು ಅನ್ನು ಉಡುಗೊರೆ ನೀಡಿದೆ.
ಈ ಹಿಂದೆ ಚಾಂಪಿಯನ್ಶಿಪ್ನಲ್ಲಿ ಗೆಲ್ಲುವ ಹಣದಿಂದ ಮರ್ಸಿಡಿಸ್ ಕಾರು ಖರೀದಿಸುವುದಾಗಿ ನಿಖತ್ ಜರೀನ್ ಹೇಳಿದ್ದರು. ಆದರೆ ತಮಗೆ ಥಾರ್ ಜೀಪ್ ಬಹುಮಾನವಾಗಿ ಸಿಕ್ಕಿರುವುದರಿಂದ ಈ ಯೋಜನೆ ಕೈಬಿಡುವ ಬಗ್ಗೆ ಯೋಚಿಸಿರುವುದಾಗಿ ಹೇಳಿದ್ದಾರೆ. ಇದರ ಬದಲಾಗಿ ಬಹುಮಾನ ಮೊತ್ತದಿಂದ ಪೋಷಕರನ್ನು ಉಮ್ರಾ ಯಾತ್ರೆ ಕಳುಹಿಸಲು ನಿರ್ಧರಿಸಿದ್ದಾರೆ.
ನಿಖತ್ ಮಾತನಾಡಿ, "ಚಾಂಪಿಯನ್‌ಶಿಪ್ ಬಹುಮಾನ ಮೊತ್ತದಿಂದ ನಾನು ಮರ್ಸಿಡಿಸ್ ಕೊಳ್ಳುವುದಾಗಿ ಹಿಂದೆ ಹೇಳಿದ್ದೆ. ಆದರೆ ನನಗೆ ಉಡುಗೊರೆಯಾಗಿ ಥಾರ್ ಸಿಕ್ಕಿದೆ. ಮರ್ಸಿಡಿಸ್ ಕಾರು ಕೊಳ್ಳುವುದಿಲ್ಲ" ಎಂದರು.
"ರಂಜಾನ್ ಮಾಸ ನಡೆಯುತ್ತಿರುವುದರಿಂದ ಪೋಷಕರನ್ನು ಉಮ್ರಾ ಯಾತ್ರೆಗೆ ಕಳುಹಿಸಲು ಬಯಸುತ್ತೇನೆ. ಪೋಷಕರೊಂದಿಗೆ ಈ ವಿಚಾರವಾಗಿ ಮಾತನಾಡುತ್ತೇನೆ" ಎಂದು ಹೇಳಿದರು. ಉಮ್ರಾ ಯಾತ್ರೆಯು ಸೌದಿ ಅರೇಬಿಯಾ ದೇಶದ ಅವಳಿ ಮುಸ್ಲಿಂ ನಗರಗಳಾದ ಮೆಕ್ಕಾ ಮತ್ತು ಮದೀನಾಕ್ಕೆ ಕೈಗೊಳ್ಳುವ ಪವಿತ್ರ ತೀರ್ಥಯಾತ್ರೆಯಾಗಿದೆ.
"ಪ್ರತಿಯೊಬ್ಬರೂ ಒಂದು ಯಶಸ್ಸಿನ ಮಂತ್ರ ಹೊಂದಿರುತ್ತಾರೆ. ನಾನು ವಿಷಯಗಳನ್ನು ದೃಶ್ಯೀಕರಿಸಲು ಇಷ್ಟಪಡುತ್ತೇನೆ. ಜೊತೆಗೆ ಧನಾತ್ಮಕವಾಗಿ ಯೋಚಿಸಲು ಇಷ್ಟಪಡುತ್ತೇನೆ. ನಾನು 'ಚಾಂಪಿಯನ್' ಎಂದು ಬರೆದಿರುವ ಒಂದು ಚೀಟಿಯಲ್ಲಿ ಚಿನ್ನದ ಪದಕದ ಚಿತ್ರ ಬಿಡಿಸಿ ನನ್ನ ಹಾಸಿಗೆಯ ಮೇಲೆ ಅಂಟಿಸಿದ್ದೆ. ಪ್ರತಿದಿನ ಎದ್ದಾಗ ನಾನು ನೋಡುತ್ತಿದ್ದೆ. ಮಲಗಲು ಹೋದಾಗಲೂ ನೋಡುತ್ತಿದ್ದೆ. ಇದು ನನ್ನನ್ನು ಸಾಧಿಸಲು ಪ್ರೇರೇಪಿಸಿತು. ಕಳೆದ ವಿಶ್ವ ಚಾಂಪಿಯನ್‌ಶಿಪ್‌ಗಳಿಗಾಗಿ ನಾನು ಇದನ್ನೇ ಮಾಡಿಕೊಂಡು ಬಂದಿದ್ದೆ. ಪ್ರಸ್ತುತ ಚಾಂಪಿಯನ್ಶಿಪ್ಗೂ ಇದನ್ನೇ ಮಾಡಿದ್ದೇನೆ" ಎಂದು ಹೇಳಿದರು.
ನಿಖತ್ ಈಗಾಗಲೇ ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಏಷ್ಯನ್ ಗೇಮ್ಸ್‌ಗೆ ಆರ್ಹತೆ ಪಡೆದಿದ್ದು, ಒಲಿಂಪಿಕ್ ಅರ್ಹತಾ ಪಂದ್ಯವೂ ಇದಾಗಿದೆ."ನನ್ನ ಮುಂದಿನ ಗುರಿ ಏಷ್ಯನ್ ಗೇಮ್ಸ್. ನಾನು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಭರವಸೆ ಇದೆ" ಎಂದು ಚಾಂಪಿಯನ್ ನಿಖತ್ ಜರೀನ್ ಹೇಳಿದ್ದಾರೆ.
ಇದನ್ನೂ ಓದಿ : ಬಾಕ್ಸಿಂಗ್ ಚಾಂಪಿಯನ್‌ಶಿಪ್: ಲೈಟ್ ಫ್ಲೈವೇಟ್ ವಿಭಾಗದಲ್ಲಿ ನಿಖತ್ ಜರೀನ್ಗೆ ಚಿನ್ನ