ನವದೆಹಲಿ: ವ್ಯಕ್ತಿಯ ಶಿರಚ್ಚೇದನ ಮಾಡಿ, ಪ್ರಧಾನಿಗೆ ಜೀವ ಬೆದರಿಕೆ ಹಾಕಿದ ಘಟನೆ ದೇಶವನ್ನೇ ನಡುಗಿಸಿದೆ. ಘಟನೆ ರಾಜಸ್ಥಾನದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಒಂದು ತಿಂಗಳವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಪರಿಸ್ಥಿತಿ ಹತೋಟಿಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಅಖಾಡಕ್ಕಿಳಿದಿದೆ.
ಎನ್‌ಐಎ ತಂಡ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉದಯಪುರಕ್ಕೆ ಆಗಮಿಸಿದೆ. ರಾಜಸ್ಥಾನದಲ್ಲಿ ತಕ್ಷಣ ಕ್ರಮವಾಗಿ ಶಾಂತಿ ನೆಲೆಸಲು ಮತ್ತು ಘಟನೆಯನ್ನು ತೀವ್ರ ತನಿಖೆ ನಡೆಸಲು ಗೃಹ ಸಚಿವಾಲಯ ಸೂಚನೆಯ ಮೇರೆಗೆ ಎನ್‌ಐಎ ರಾಜ್ಯಕ್ಕೆ ಆಗಮಿಸಿದೆ.
ಎನ್‌ಐಎ ತಂಡವು ಅಪರಾಧ ಸ್ಥಳಕ್ಕೆ ಭೇಟಿ ನೀಡಿದ ನಂತರ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
1 ತಿಂಗಳು ನಿಷೇಧಾಜ್ಞೆ: ಉದಯಪುರದಲ್ಲಿ ಮಂಗಳವಾರ ಹಾಡಹಗಲೇ ನಡೆದ ವ್ಯಕ್ತಿಯ ಬರ್ಬರ ಹತ್ಯೆಯಿಂದಾಗಿ ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಅಲ್ಲದೇ, 24 ಗಂಟೆಗಳ ಕಾಲ ಇಂಟರ್ನೆಟ್ ಸ್ಥಗಿತಗೊಳಿಸಿದೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಇಡೀ ರಾಜ್ಯದಲ್ಲಿ 24 ಗಂಟೆಗಳ ಕಾಲ ಇಂಟರ್ನೆಟ್ ಅನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಮುಂದಿನ 30 ದಿನಗಳ ಕಾಲ ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರೊಂದಿಗೆ ಮುಂದಿನ ಆದೇಶದವರೆಗೆ ಪೊಲೀಸ್ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದೆ. ಯಾವುದೇ ರೀತಿಯ ಆಕ್ಷೇಪಾರ್ಹ ವಿಡಿಯೋ ಪ್ರಸಾರ ಮಾಡಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ವ್ಯಕ್ತಿಯ ಶಿರಚ್ಚೇದಿಸಿ, ಪ್ರಧಾನಿಗೆ ಬೆದರಿಕೆ ಹಾಕಿದ್ದ ಹಂತಕರ ಬಂಧನ; ಉದಯಪುರದಲ್ಲಿ ನಿಷೇಧಾಜ್ಞೆ