ಮಂಗಳೂರು/ಶ್ರೀನಗರ: ಕೇರಳದ ಐಸಿಸ್ ಮಾಡ್ಯೂಲ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಇಂದು ಬೆಳಗ್ಗೆ ಜಮ್ಮು - ಕಾಶ್ಮೀರ ಮತ್ತು ಕರ್ನಾಟಕದ ಹಲವು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ. ಹಲವು ತಂಡಗಳು ಏಕಕಾಲದಲ್ಲಿ ಶೋಧಕಾರ್ಯ ನಡೆಸಿದ್ದು, ಕರ್ನಾಟಕದ ಇಬ್ಬರು ಸೇರಿದಂತೆ ನಾಲ್ವರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.
ಜಮ್ಮು - ಕಾಶ್ಮೀರದ ಮೂರು ಸ್ಥಳ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಶೋಧಕಾರ್ಯ ನಡೆಸಿರುವುದಾಗಿ ಎನ್ಐಎ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕರ್ನಾಟಕದ ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಇದಿನಬ್ಬ ಪುತ್ರನ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಇಸ್ಮಾಯಿಲ್ ಹಾಗೂ ಆತನ ಪತ್ನಿಯನ್ನ ವಿಚಾರಣೆಗೊಳಪಡಿಸಿದ್ದಾಗಿ ತಿಳಿದು ಬಂದಿದೆ.
ಮಾಜಿ ಶಾಸಕನ ಮೊಮ್ಮಗನ ಬಂಧನ
ಉಳ್ಳಾಲದ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಮೊಮ್ಮಗ ಅಮ್ಮರ್ ಅಬ್ದುಲ್ ರಹಮಾನ್ ಕೂಡ ಬಂಧನವಾಗಿದ್ದಾನೆ. ಕೇರಳ ಮೂಲದ ಮೊಹಮ್ಮದ್ ಅಮೀನ್ ಎಂಬಾತ ಐಸಿಸ್ ಬಗ್ಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದನು. ಈತನ ವಿರುದ್ಧ 2021 ಮಾರ್ಚ್ 5ರಂದು ಎನ್ಐಎ ಸುಮೊಟೋ ಪ್ರಕರಣ ದಾಖಲಿಸಿತ್ತು. ವಿಚಾರಣೆಯ ವೇಳೆ ಮೊಹಮ್ಮದ್ ಅಮೀನ್ ಭಯೋತ್ಪಾದಕ ಚಟುವಟಿಕೆ ನಡೆಸುವುದರ ಜೊತೆಗೆ ಹಣ ಸಂಗ್ರಹ ಚಟುವಟಿಕೆಗಳಲ್ಲಿ ತೊಡಗಿರುವುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಐಸಿಸ್ ಉಗ್ರ ಮೊಹಮ್ಮದ್ ಅಮೀನ್ ಸಂಪರ್ಕದಲ್ಲಿದ್ದವರ ಮನೆಗೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಕಾಸರಗೋಡಿನ 17 ಮಂದಿ ಸಿರಿಯಾದ ಐಸಿಸ್ ಉಗ್ರ ಸಂಘಟನೆ ಸೇರಿಕೊಂಡಿದ್ದರು. ಇದರಲ್ಲಿ ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾ ಪುತ್ರಿ ಅಜ್ಮಲ್ ಕುಟುಂಬವು ಸೇರಿತ್ತು. ಹೀಗಾಗಿ ಇಂದು ಅವರ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಅಮ್ಮರ್ ಅಬ್ದುಲ್ ರಹಮಾನ್ ಬಂಧನ ಮಾಡಿದ್ದಾರೆ.
ಇದನ್ನೂ ಓದಿರಿ: TCS,Wipro,ಇನ್ಫೋಸಿಸ್ ಸೇರಿ ಇತರ IT ಕಂಪನಿಗಳಿಂದ 60 ಸಾವಿರ ಮಹಿಳಾ ಉದ್ಯೋಗಿಗಳ ನೇಮಕ!
ಜಮ್ಮು- ಕಾಶ್ಮೀರದ ರಾಜಧಾನಿ ಶ್ರೀನಗರ, ಅನಂತ್ನಾಗ್, ಬಾರಾಮುಲ್ಲಾ ಜಿಲ್ಲೆಗಳಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿ, ಭಯೋತ್ಪಾದನಾ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಈ ಹಿಂದೆ ಐವರ ಬಂಧನ ಮಾಡಿದ್ದಾರೆ.
ಬಂಧಿತರನ್ನ ಒಬೈದ್ ಹಮೀದ್(ಶ್ರೀನಗರ), ಮುಜಮ್ಮಿಲ್ ಹಸನ್ ಭಟ್(ಕಾಶ್ಮೀರದ ಬಂಡಿಪೊರ್), ಅಮ್ಮರ್ ಅಬ್ದುಲ್ ರಹಮಾನ್(ಉಳ್ಳಾಲ,ಮಂಗಳೂರು) ಹಾಗೂ ಶಂಕರ್ ವೆಂಕಟೇಶ್ ಪೆರುಮಾಳ್(ಬೆಂಗಳೂರು) ಎಂದು ಗುರುತಿಸಲಾಗಿದೆ.