ಶ್ರೀನಗರ, ಜಮ್ಮು ಕಾಶ್ಮೀರ : ಹಲವು ತಿಂಗಳುಗಳಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶದಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಂ ಪರ್ವೇಜ್ ಅವರ ನಿವಾಸದ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಖುರ್ರಂ ಪರ್ವೇಜ್ ಅವರನ್ನು ಕಳೆದ ನವೆಂಬರ್ನಿಂದ ಎನ್ಐಎ ವಶಕ್ಕೆ ಪಡೆದಿದ್ದು, ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಶುಕ್ರವಾರವಷ್ಟೇ ಎನ್‌ಐಎ ನ್ಯಾಯಾಲಯ ಖುರ್ರಂ ಪರ್ವೇಜ್ ಬಂಧನವನ್ನು ಮತ್ತಷ್ಟು ವಿಸ್ತರಿಸಿದೆ. ಖುರ್ರಂ ಪರ್ವೇಜ್ ಅವರನ್ನು ನವೆಂಬರ್ 22, 2021ರಂದು ಬಂಧಿಸಲಾಗಿತ್ತು. ಅದಕ್ಕೂ ಮುನ್ನ ಖುರ್ರಂ ಪರ್ವೇಜ್ ಸಂಬಂಧಿಸಿದ ಶ್ರೀನಗರದಲ್ಲಿರುವ ಅವರ ಮನೆ ಮತ್ತು ಜೆಕೆಸಿಸಿಎಸ್ ಕಚೇರಿಯಲ್ಲಿ ದಿನವಿಡೀ ಶೋಧ ನಡೆಸಲಾಗಿತ್ತು.
ಮೊದಲಿಗೆ ಖುರ್ರಂ ಪರ್ವೇಜ್ ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ನಂತರ ಅವರನ್ನು ಬಂಧಿಸಲಾಯಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 121 ಮತ್ತು 121ಎ ಮತ್ತು ಯುಎಪಿಎ ಸೆಕ್ಷನ್ 17, 18, 18ಬಿ, 38 ಮತ್ತು 40ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಖುರ್ರಂ ಪರ್ವೇಜ್ ಕುಟುಂಬಕ್ಕೆ ನೀಡಿರುವ ಬಂಧನದ ಮೆಮೊದಲ್ಲಿ ತಿಳಿಸಲಾಗಿದೆ. ಇಬ್ಬರು ಸರ್ಕಾರಿ ನೌಕರರಾದ ಸೊಹೈಲ್ ಅಹ್ಮದ್ ಮಿರ್ ಮತ್ತು ರೋಮನ್ ಖಯ್ಯೂಮ್ ಅವರು ಬಂಧನಕ್ಕೆ ಸಾಕ್ಷಿಗಳಾಗಿದ್ದು, ಖುರ್ರಂ ಅವರನ್ನು ಬಂಧಿಸಲು ಸ್ಪಷ್ಟ ಕಾರಣಗಳನ್ನು ನೀಡಲಾಗಿದೆ ಎಂದು ಮೆಮೋದಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದ ಆರ್ಮಿ ಕ್ಯಾಂಪ್ ಬಳಿ ನಿಗೂಢ ಸ್ಫೋಟ