ನವದೆಹಲಿ: ಐಎಸ್‌ಐಎಸ್ ಅನ್ನು ದಮನ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ದೊಡ್ಡ ಹೊಡೆತವನ್ನೇ ಕೊಟ್ಟಿದೆ. ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ದೋಷಿಗಳೆಂದು ಲಕ್ನೋದ ವಿಶೇಷ ನ್ಯಾಯಾಲಯ ಘೋಷಿಸಿದೆ.
2017ರಲ್ಲಿ ಕಾನ್ಪುರ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು, ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಈ ಐಸಿಸ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಎಂಟು ಆರೋಪಿಗಳ ವಿರುದ್ಧದ ಪ್ರಕರಣವನ್ನು 2017ರ ಮಾರ್ಚ್ 8ರಂದು ಲಕ್ನೋದ ಪೊಲೀಸ್ ಠಾಣೆ, ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಲ್ಲಿ ದಾಖಲಿಸಲಾಗಿತ್ತು. ಮಾರ್ಚ್ 14ರಂದು ಎನ್ಐಎನಿಂದ ಮತ್ತೊಮ್ಮೆ ದೂರು ದಾಖಲು ಮಾಡಲಾಗಿತ್ತು. ಪ್ರಕರಣದ ಕುರಿತು ಶಿಕ್ಷೆಯ ಪ್ರಮಾಣವನ್ನು ಎನ್ಐಎ ನ್ಯಾಯಾಲಯ ಸೋಮವಾರ (ಫೆ.27) ಪ್ರಕಟಿಸಲಿದೆ.
ಪತ್ತೆಯಾಗಿದ್ದ ಸುಧಾರಿತ ಸ್ಫೋಟಕ ಸಾಧನಗಳು: ಆರೋಪಿಗಳು ಕೆಲವು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಸಿದ್ಧಪಡಿಸಿ ಪರೀಕ್ಷೆಗೆ ಒಳಪಡಿಸಿದ್ದರು. ಯುಪಿಯ ವಿವಿಧ ಸ್ಥಳಗಳಲ್ಲಿ ಅವುಗಳನ್ನು ಬಳಸಲು ಸ್ಥಾಪಿಸಲು ವಿಫಲರಾಗಿದ್ದರು ಎಂದು ಎನ್ಐಎ ತನಿಖೆಯಿಂದ ಬಹಿರಂಗವಾಗಿತ್ತು. ಅವರ ಹಾಜಿ ಕಾಲೋನಿ (ಲಕ್ನೋ) ಅಡಗುತಾಣದಿಂದ ವಶಪಡಿಸಿಕೊಂಡ ಬಾಂಬ್ ತಯಾರಿಕೆ ಸೇರಿಂದತೆ ವಿವಿಧ ಮಾಹಿತಿಗಳು ದೊರೆತಿದ್ದವು. ಆರೋಪಿಗಳು ಐಇಡಿಗಳನ್ನು ತಯಾರಿಸುತ್ತಿರುವ ಹಲವಾರು ಛಾಯಾಚಿತ್ರಗಳು ಮತ್ತು ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಐಸಿಸ್ ಧ್ವಜವನ್ನು ಸಹ ಪತ್ತೆಹಚ್ಚಲು ಕಾರಣವಾಯಿತು ಎಂದು ಎನ್ಐಎ ತಿಳಿಸಿದೆ.
ರೈಲು ಸ್ಫೋಟ ಪ್ರಕರಣ: ಈ ಗುಂಪು ವಿವಿಧ ಸ್ಥಳಗಳಿಂದ ಅಕ್ರಮ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಇತ್ಯಾದಿಗಳನ್ನು ಸಂಗ್ರಹಿಸಿದೆ ಎಂದು ವರದಿಯಾಗಿದೆ. ಆರೋಪಿಗಳಲ್ಲಿ ಒಬ್ಬರಾದ ಅತೀಫ್ ಮುಜಾಫರ್ ಅವರು ವಿವಿಧ ಅಂತರ್ಜಾಲ ಮೂಲಗಳಿಂದ ವಸ್ತುಗಳನ್ನು ಸಂಗ್ರಹಿಸಿದ ನಂತರ ಐಇಡಿಗಳನ್ನು ತಯಾರಿಸುವ ತಂತ್ರಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಜೊತೆಗೆ ಭೋಪಾಲ್-ಉಜ್ಜಯಿನಿ ಪ್ಯಾಸೆಂಜರ್ ರೈಲಿನಲ್ಲಿ ಅಳವಡಿಸಲಾಗಿದ್ದ ಐಇಡಿಯನ್ನು ತಯಾರಿಸುವ ಜವಾಬ್ದಾರಿಯನ್ನು ಎಂಡಿ ಡ್ಯಾನಿಶ್, ಸೈಯದ್ ಮೀರ್ ಹಸನ್ ಮತ್ತು ಎಂಡಿ ಸೈಫುಲ್ಲಾ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 2017ರ ಮಾರ್ಚ್ 7ರಂದು ರೈಲು ಸ್ಫೋಟ ಪ್ರಕರಣದಲ್ಲಿ 10 ಮಂದಿ ಗಾಯಗೊಂಡಿದ್ದರು. ಈ ಪ್ರಕರಣವನ್ನು ಕೂಡಾ ಎನ್‌ಐಎ ತನಿಖೆ ನಡೆಸಿದ್ದು, ಪ್ರಸ್ತುತ ವಿಚಾರಣೆ ಹಂತದಲ್ಲಿದೆ.
ಮಧ್ಯಪ್ರದೇಶ ರೈಲು ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ ಕಾನ್ಪುರ ನಗರದ ನಿವಾಸಿ ಎಂ.ಡಿ. ಫೈಸಲ್ ಎಂದು ಗುರುತಿಸಲಾದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿತ್ತು. ಈತ ಐಸಿಸ್ ಬೆಂಬಲಿತ ಅಪರಾಧ ಪಿತೂರಿ ಪ್ರಕರಣದಲ್ಲಿ ತೊಡಗಿದ್ದು ಕಂಡುಬಂದಿದೆ. ಅವನ ಇಬ್ಬರು ಸಹಚರರಾದ ಗೌಸ್ ಮೊಹಮ್ಮದ್ ಖಾನ್ ಅಲಿಯಾಸ್ ಕರಣ್ ಖತ್ರಿ ಮತ್ತು ಅಜರ್ ಖಾನ್ ಅಲಿಯಾಸ್ ಅಜರ್ ಖಲೀಫಾ ಅವರನ್ನು ಮಾರ್ಚ್ 9 ರಂದು ಬಂಧಿಸಲಾಗಿತ್ತು.
ಎನ್‌ಐಎ ಚಾರ್ಜ್‌ಶೀಟ್: ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡ ನಂತರ, ಈ ಪ್ರಕರಣದಲ್ಲಿ ಮತ್ತೆ ಐವರು ಆರೋಪಿಗಳನ್ನು ಬಂಧಿಸಿತ್ತು. ಆರೋಪಿಗಳಾದ ಅತೀಫ್ ಮುಜಾಫರ್, ಮೊಹಮ್ಮದ್ ದಾನಿಶ್, ಆಸಿಫ್ ಇಕ್ಬಾಲ್ ಅಲಿಯಾಸ್ ರಾಕಿ ಮತ್ತು ಮೊಹಮ್ಮದ್ ಅತೀಫ್ ಅಲಿಯಾಸ್ ಅತೀಫ್ ಇರಾಕಿ ಎಂದು ಗುರುತಿಸಲಾಗಿತ್ತು. ಎಲ್ಲರೂ ಕಾನ್ಪುರ ನಗರದಿಂದ ಮೂಲದವರು ಹಾಗೂ ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಸೈಯದ್ ಮೀರ್ ಹುಸೇನ್ ಬಂಧಿತ. ಈ ಎಂಟು ಆರೋಪಿಗಳ ವಿರುದ್ಧ 2017ರ ಆಗಸ್ಟ್ 31ರಂದು ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಎನ್‌ಐಎ ಮಾಹಿತಿ: ಎನ್‌ಐಎ ವಕ್ತಾರರ ಪ್ರಕಾರ, ಈ ಆರೋಪಿಗಳು ಐಸಿಸ್‌ನ ಸದಸ್ಯರು ಮತ್ತು ಇಸ್ಲಾಮಿಕ್ ಸ್ಟೇಟ್ ಮತ್ತು ಅದರ ನಾಯಕ ಅಬು ಬಕರ್ ಅಲ್-ಬಾಗ್ದಾದಿಗೆ ನಿಷ್ಠೆಯಿಂದ ಇರುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದರು ಎಂದು ಪ್ರಕರಣದ ತನಿಖೆಯು ಸ್ಪಷ್ಟವಾಗಿ ತೋರಿಸಿದೆ. ಆತಿಫ್ ಮುಜಾಫರ್ ಗುಂಪಿನ ನಾಯಕ ಆಗಿದ್ದರು. ಜಾಕಿರ್ ನಾಯ್ಕ್ ಅವರ ಪ್ರಚಾರದಿಂದ ಪ್ರಭಾವಿತರಾಗಿದ್ದರು. ಅವರು ಐಎಸ್-ಸಂಬಂಧಿತ ವೆಬ್‌ಸೈಟ್‌ಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಅಲ್ಲಿಂದ ಅವರು ವಿಷಯ ಮತ್ತು ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು ಹಾಗೂ ಅದನ್ನು ತಮ್ಮ ಗುಂಪಿನಲ್ಲಿರುವ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಭೂ ಮಾರ್ಗ ಕಂಡುಹಿಡಿದಿದ್ದ ಆರೋಪಿಗಳು: ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡಲು ಮತ್ತು ಭಾರತದಲ್ಲಿ ಅದರ ಚಟುವಟಿಕೆಗಳನ್ನು ಉತ್ತೇಜಿಸಲು ಈ ಎಂಟು ಆರೋಪಿಗಳು ಒಟ್ಟಾಗಿ ಸೇರಿದ್ದರು. ಮೊಹಮ್ಮದ್ ಫೈಸಲ್, ಗೌಸ್ ಮೊಹಮ್ಮದ್ ಖಾನ್, ಅತೀಫ್ ಮುಜಾಫರ್, ಎಂಡಿ ಡ್ಯಾನಿಶ್ ಮತ್ತು ಎಂ.ಡಿ. ಸೈಫುಲ್ಲಾ ಭೂ ಮಾರ್ಗಗಳನ್ನು ಕಂಡುಹಿಡಿದಿದ್ದರು. ಆರೋಪಿಗಳು ಕೋಲ್ಕತ್ತಾ, ಸುಂದರಬನ್ಸ್, ಶ್ರೀನಗರ, ಅಮೃತಸರ, ವಾಘಾ ಬಾರ್ಡರ್, ಬ್ಯಾಡ್ಮರ್, ಜೈಸಲ್ಮೇರ್, ಮುಂಬೈ ಮತ್ತು ಕೋಝಿಕ್ಕೋಡ್ ಸೇರಿದಂತೆ ದೇಶಾದ್ಯಂತ ಹಲವಾರು ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದಾರೆ ಎಂದು ಎನ್ಐಎ ತಿಳಿಸಿದೆ.
ಇದನ್ನೂ ಓದಿ: ಅಕ್ರಮ ಶಸ್ತ್ರಾಸ್ತ್ರ ಪ್ರಕರಣ : ಐಟಿಬಿಪಿ ಅಧಿಕಾರಿಯ ಪುತ್ರ ಸೇರಿ ನಾಲ್ವರ ಬಂಧನ