ನವದೆಹಲಿ: ಜಾರ್ಖಂಡ್‌ನ ಮಾವೋವಾದಿಗಳ ಮದ್ದುಗುಂಡು ಮತ್ತು ಶಸ್ತಾಸ್ತ್ರ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಓರ್ವ ಮಹಿಳೆ ಸೇರಿದಂತೆ 16 ಆರೋಪಿಗಳ ವಿರುದ್ಧ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಏಜೆನ್ಸಿಯು ಭಾನುವಾರ ತಿಳಿಸಿದೆ. ಸದ್ಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಆರೋಪಿಗಳ ಸಂಖ್ಯೆ 25 ಕ್ಕೆ ಏರಿದೆ.
ಈ ಪ್ರಕರಣ ಕಳೆದ ವರ್ಷ ಮಾವೋವಾದಿ ಕಾರ್ಯಕರ್ತರ ಬಂಧನ ಮತ್ತು ಲೋಹರ್ದಗಾದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದವುಗಳಾಗಿವೆ.
ಪ್ರಕರಣ ವಿವರ: 2022 ಫೆಬ್ರವರಿ 21 ರಂದು ಅಲ್ಲಿನ ಸ್ಥಳೀಯ ಪೊಲೀಸರು ಮಾವೋವಾದಿಗಳ ವಿರುದ್ಧ ತನಿಖೆ ನಡೆಸಿರುವ ಪ್ರಥಮ ಮಾಹಿತಿಯುಳ್ಳ ವರದಿಯನ್ನು ದಾಖಲಿಸಿದ್ದರು. ಅದೇ ವರ್ಷ ಜೂನ್ 14 ರಂದು ಈ ಪ್ರಕರಣವನ್ನು ಎನ್ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಕೈಗೆತ್ತಿಕೊಂಡಿತ್ತು. ಬಳಿಕ ಬುಲ್ಬುಲ್ ಅರಣ್ಯ ಪ್ರದೇಶಗಳಲ್ಲಿ ಹಲವು ದಾಳಿಗಳನ್ನು ನಡೆಸಲಾಗಿತ್ತು.
ಈ ವೇಳೆ, ದಾಳಿಯಿಂದ ಅಲ್ಲಿ ಮಾವೋವಾದಿ ಪ್ರಾದೇಶಿಕ ಕಮಾಂಡರ್ ರವೀಂದ್ರ ಗಂಜು, ಬಲರಾಮ್ ಓರಾನ್, ಮುನೇಶ್ವರ್ ಗಂಜು, ಬಾಲಕ್ ಗಂಜು, ದಿನೇಶ್ ನಗೇಸಿಯಾ, ಅಘ್ನು ಗಂಜು, ಲಜಿಮ್ ಅನ್ಸಾರಿ, ಮರ್ಕುಶ್ ನಗೇಸಿಯಾ, ಸಂಜಯ್ ನಗೇಸಿಯಾ, ಶೀಲಾ ಖೇರ್ವಾರ್, ಲಲಿತಾ ದೇವಿ ಮತ್ತು ಸುಮಾರು 40ರಿಂದ60 ಮಂದಿ ಸಕ್ರಿಯ ಕಾರ್ಯಕರ್ತರೊಂದಿಗೆ ಸೇರಿ ಭದ್ರತಾ ಪಡೆಗಳ ಮೇಲೆ ಮತ್ತು ಬಾಕ್ಸೈಟ್ ಗಣಿ ಪ್ರದೇಶದಲ್ಲಿ ಹಿಂಸಾತ್ಮಕ ದಾಳಿಗೆ ಸಂಚು ರೂಪಿಸಿದ್ದರು ಎಂಬುದಾಗಿ ತನಿಖೆಯಲ್ಲಿ ಬಹಿರಂಗವಾಗಿತ್ತು.
ಬಳಿಕ ಮಾವೋವಾದಿಗಳ ವಿರುದ್ಧ ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಮಾವೋವಾದಿ ಕಾರ್ಯಕರ್ತರು ಹರ್ಕಟ್ಟಾ ಟೋಲಿಯಲ್ಲಿ ಬಹಬರ್ ಜಂಗಲ್‌ಗೆ ಹೋಗುವ ದಾರಿಯಲ್ಲಿ ಭದ್ರತಾ ಪಡೆಗಳ ಮೇಲೆ ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ನಂತರ ಆ ಪ್ರದೇಶದಲ್ಲಿ ಕಾರ್ಯಾಚರಣೆ ತೀವ್ರಗೊಂಡಿತ್ತು. ತನಿಖೆ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳು ಸ್ಫೋಟಕಗಳು, ಮದ್ದುಗುಂಡುಗಳು ಮತ್ತು ಇತರ ವಸ್ತುಗಳು ದೊರಕಿದ್ದವು. ಅವುಗಳನ್ನು ನಕ್ಸಲ್ ನಿಗ್ರಹ ಪಡೆಗಳು ವಶಕ್ಕೆ ಪಡೆದುಕೊಂಡಿದ್ದವು.
ದೇಶದಲ್ಲಿ ನಿಷೇಧಿತ ಉಗ್ರ ಸಂಘಟನೆಯಾಗಿರುವ ಸಿಪಿಐ ಅಥವಾ ಮಾವೋವಾದಿಗಳು ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಭಾರತದ ಭದ್ರತೆಗೆ ಕೆಡುಕುಂಟು ಮಾಡಲು ಯೋಜನೆ ರೂಪಿಸಿದ್ದರು. ಹಾಗೆ ತಮ್ಮ ದಾಳಿಗಳ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವುದು ಅವರ ಉದ್ದೇಶವಾಗಿತ್ತು.
ಅಲ್ಲದೇ ಈ ಸಂಘಟನೆಯ ಪ್ರಮುಖ ಕಮಾಂಡರ್ಗಳು ಮತ್ತು ಕಾರ್ಯಕರ್ತರು 2022 ರ ಆಗಸ್ಟ್ನಿಂದ ಸೆಪ್ಟೆಂಬರ್ವರೆಗೆ ಬುಧಾ ಪಹಾರ್ನಲ್ಲಿ ಪಿತೂರಿ ಕೂಡ ನಡೆಸಿದ್ದರು ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿದ್ದವು. ಮುಖ್ಯವಾಗಿ ಮಾವೋವಾದಿ ಸಂಘಟನೆಯ ನಾಯಕ ಪ್ರಶಾಂತ್ ಬೋಸ್ ಬಂಧನದ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಲ್ಲದೇ, ಭದ್ರತಾ ಪಡೆ ಮತ್ತು ಪೊಲೀಸರ ವಿರುದ್ಧ ಉಗ್ರ ಕೃತ್ಯಗಳನ್ನು ನಡೆಸುವ ಪ್ಲಾನ್್ ಹೊಂದಿದ್ದರು.
ಆರೋಪ ಪಟ್ಟಿ: ಭಾರತೀಯ ದಂಡ ಸಂಹಿತೆಯ ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಸಿಎಲ್‌ಎ ಕಾಯ್ದೆ ಮತ್ತು ಯುಎ ಕಾಯ್ದೆಯ ವಿವಿಧ ವಿಭಾಗಗಳ ಅಡಿ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು. ಈ ಆರೋಪ ಪಟ್ಟಿಯಲ್ಲಿ ಆರೋಪಿಗಳನ್ನು ಬಲರಾಮ್ ಓರಾನ್ ಅಲಿಯಾಸ್ ಬಾಲಿ, ಸೈಲೇಶ್ವರ್ ಓರಾನ್ ಅಲಿಯಾಸ್ ಮನದೀಪ್ ಅಲಿಯಾಸ್ ಕಸಾಯಿ, ದಸರತ್ ಸಿಂಗ್ ಖೇರ್ವಾರ್, ಶೈಲೇಂದರ್ ನಗೇಸಿಯಾ ಅಲಿಯಾಸ್ ವಿನೋದ್ ನಗೇಸಿಯಾ, ಮಾರ್ಕುಶ್ ನಗೇಸಿಯಾ ಅಲಿಯಾಸ್ ಮರ್ಕುಶ್ ಜಿ, ಮುಖೇಶ್ ಕೊರ್ವಾ, ಬಿರೆನ್ ಕೊರ್ವಾ, ಶೀಲಾ ಖೇರ್ವಾರ್, ಸಂಜಯ್ ನಾಗೇಸಿಯಾ ಅಲಿಯಾಸ್ ಮೋಟಾ, ಬಾಲಕ್ ಗಂಜು ಅಲಿಯಾಸ್ ಸುಖದಯಾಲ್ ಗಂಜು, ಸೂರಜ್ ನಾಥ್ ಖೇರ್ವಾರ್ ಅಲಿಯಾಸ್ ಗುಡ್ಡು, ನಂದಕಿಶೋರ್ ಭಾರತಿ ಅಲಿಯಾಸ್ ಸುದರ್ಶನ್ ಭುಯಾನ್, ಅಮನ್ ಗಂಜು ಅಲಿಯಾಸ್ ಅಮನ್ ಜಿ ಅಲಿಯಾಸ್ ಭೋಕ್ತಾ ಅಲಿಯಾಸ್ ಅನಿಲ್ ಗಂಜು ಅಲಿಯಾಸ್ ಪ್ರಮುಖ್ ಸಿಂಗ್ ಭೋಕ್ತಾ ಅಲಿಯಾಸ್ ಕಾಜು, ಜತ್ರು ಖೇರ್ವಾರ್ ಅಲಿಯಾಸ್ ಜತ್ರು ಜಿ ಅಲಿಯಾಸ್ ತಾನಾ ಖೇರ್ವಾರ್, ಮುನೇಶ್ವರ್ ಗಂಜು ಅಲಿಯಾಸ್ ಜೆ ಬಿತಾನ್ ಗಂಜು ಅಲಿಯಾಸ್ ಮುನ್ಶಿ ಜಿ, ಮತ್ತು ಗೋವಿಂದ ಬಿರಿಜಿಯಾ ಎಂದು ಗುರುತಿಸಲಾಗಿದೆ.
ಇದರಲ್ಲಿ 16 ಆರೋಪಿಗಳಿದ್ದು ಈ ಹಿಂದೆ 2021 ರ ಮೇ 18ರಂದು ಜಾರ್ಖಂಡ್ ಪೊಲೀಸರು 9 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಒಟ್ಟು 25 ಮಾವೋವಾದಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ: 10 ಮಂದಿ ಮಾವೋವಾದಿಗಳ ಬಂಧಿಸಿ ಬಹುದೊಡ್ಡ ಸ್ಫೋಟ ತಪ್ಪಿಸಿದ ಪೊಲೀಸರು!