ಹೈದರಾಬಾದ್: ಕಳೆದ ಮಧ್ಯರಾತ್ರಿಯಿಂದ ದಿಢೀರ್ ಕಾರ್ಯಾಚರಣೆ ಕೈಗೊಂಡಿರುವ 200ಕ್ಕೂ ಹೆಚ್ಚು ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ದೇಶದ ವಿವಿಧ ರಾಜ್ಯದಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಕರ್ನಾಟಕ, ತಮಿಳುನಾಡು ಸೇರಿದಂತೆ ವಿವಿಧೆಡೆ ಏಕಕಾಲದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮೇಲೆ ನಡೆದಿರುವ ಅತಿದೊಡ್ಡ ದಾಳಿಯಾಗಿದೆ.
ದೇಶದಲ್ಲಿ ಭಯೋತ್ಪಾದನೆಗೆ ಧನಸಹಾಯ, ಅಕ್ರಮ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳ ಆಯೋಜನೆ ಮತ್ತು ನಿಷೇಧಿತ ಸಂಘಟನೆಯನ್ನು ಸೇರಲು ಜನರಿಗೆ ಪ್ರಚೋದನ ನೀಡುತ್ತಿರುವ ಗಂಭೀರ ಆರೋಪದ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಈ ಬೃಹತ್ ಕಾರ್ಯಾಚರಣೆ ನಡೆಸಲಾಗಿದೆ.
ಕೇರಳದ ಮಲಪ್ಪುರಂನಲ್ಲಿ ದಾಳಿ: ಮುಖ್ಯವಾಗಿ, ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್ಐ ಅಧ್ಯಕ್ಷ ಒಎಂಎ ಸಲಾಂ ಎಂಬವರ ಮನೆ, ಪಿಎಫ್‌ಐ ರಾಜ್ಯ, ಜಿಲ್ಲಾ ಮಟ್ಟದ ನಾಯಕರ ಮನೆ ಜೊತೆಗೆ ವಿವಿಧ ಪಿಎಫ್‌ಐ ಕಚೇರಿಗಳ ಮೇಲೆ ಎನ್ಐಎ ಹಾಗೂ ಇಡಿ ಒಟ್ಟಿಗೆ ಆಟ್ಯಾಕ್ ಮಾಡಿವೆ. ಇದರ ಬೆನ್ನಲ್ಲೇ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವ ಘಟನೆಗಳೂ ನಡೆದಿವೆ.
ಇದನ್ನೂ ಓದಿ: ಮಂಗಳೂರಿನ ಪಿಎಫ್ಐ, ಎಸ್ಡಿಪಿಐ ಕಚೇರಿ ಮೇಲೆ ಎನ್ಐಎ ದಾಳಿ: ಗೋ ಬ್ಯಾಕ್ ಘೋಷಣೆ
100ಕ್ಕೂ ಹೆಚ್ಚು PFI ಕಾರ್ಯಕರ್ತರು ವಶಕ್ಕೆ: ಪ್ರಾಥಮಿಕ ಮಾಹಿತಿ ಪ್ರಕಾರ, ದೇಶದ 10 ರಾಜ್ಯಗಳಲ್ಲಿ ಎನ್ಐಎ ಹಾಗೂ ಇಡಿ ಒಟ್ಟಿಗೆ ದಾಳಿ ನಡೆಸಿದ್ದು, 100ಕ್ಕೂ ಹೆಚ್ಚಿನ ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮನಾಡ್, ದಿಂಡುಗಲ್, ತೇಣಿ ಮತ್ತು ತೆಂಕಾಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪಿಎಫ್‌ಐ ಪದಾಧಿಕಾರಿಗಳ ಮನೆಗಳ ಮೇಲೆ ನ್‌ಐಎ ಶೋಧಕಾರ್ಯ ನಡೆಯುತ್ತಿದ್ದು, ಪುರಸವಕ್ಕಂನಲ್ಲಿರುವ ಚೆನ್ನೈ PFI ರಾಜ್ಯ ಪ್ರಧಾನ ಕಚೇರಿಗೂ ಅಧಿಕಾರಿಗಳು ತೆರಳಿದ್ದಾರೆ.
ಮಂಗಳೂರಿನ ವಿವಿಧೆಡೆ ದಾಳಿ: ರಾಷ್ಟ್ರೀಯ ತನಿಖಾ ದಳ ಮಂಗಳೂರಿನಲ್ಲಿರುವ ನೆಲ್ಲಿಕಾಯಿ ರಸ್ತೆಯ ಪಿಎಫ್ಐ ಕಚೇರಿ ಮೇಲೂ ದಾಳಿ ನಡೆಸಿದ್ದು, ಶಸ್ತ್ರಸಜ್ಜಿತ ಕೇಂದ್ರೀಯ ಪಡೆಗಳೊಂದಿಗೆ ಕಚೇರಿಗೆ ಪ್ರವೇಶಿಸಿದ್ದಾರೆ. ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕರ್ ಕುಳಾಯಿ ಸೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆಂದು ತಿಳಿದು ಬಂಂದಿದೆ. ಇದರ ಬೆನ್ನಲ್ಲೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗ್ತಿದೆ.