ಶ್ರೀನಗರ(ಜಮ್ಮು-ಕಾಶ್ಮೀರ) : ನಿಷೇಧಿತ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸಿದೆ.
ನವೆಂಬರ್ 6, 2021 ರಂದು ಎನ್‌ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅರವಿಂದ್ ದಿಗ್ವಿಜಯ್ ನೇಗಿ ಹಾಗೂ ಇತರ ಐವರನ್ನು ಅರೆಸ್ಟ್ ಮಾಡಲಾಗಿದೆ.
2011ರಲ್ಲಿ ಐಪಿಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದ ಅರವಿಂದ್ ದಿಗ್ವಿಜಯ್ ನೇಗಿ, ಈ ಹಿಂದೆ ಎನ್ಐಎನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಎಸ್‌ಪಿಯಾಗಿ ಇವರು ಹಲವು ಪ್ರಕರಣಗಳ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇಂತವರೇ ಇದೀಗ ಉಗ್ರರಿಗೆ ಬೆಂಬಲ ನೀಡುತ್ತಿರುವುದು ದುರಂತದ ಸಂಗತಿಯಾಗಿದೆ.
ಇದನ್ನೂ ಓದಿ: ಕಸ್ಟಡಿಯಲ್ಲಿದ್ದಾಗಲೇ ಮೃತಪಟ್ಟ ಕಳ್ಳತನದ ಆರೋಪಿ: ತನಿಖೆಗೆ ಆದೇಶಿಸಿದ ಕಮಿಷನರ್
ಎಲ್‌ಇಟಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಉಗ್ರರಿಗೆ ಮಾಹಿತಿ ನೀಡಿರುವ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಆರು ಜನರನ್ನು ಏಜೆನ್ಸಿ ಬಂಧಿಸಿದೆ. ಶೀಘ್ರದಲ್ಲೇ ಹೆಚ್ಚಿನ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.