ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಧನಕ್ಕೆ ನೆರವಾಗುವ ಪೂರಕ ಮಾಹಿತಿ ಕೊಟ್ಟವರಿಗೆ 25 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ. ಅಲ್ಲದೇ ದಾವೂದ್ ಆಪ್ತ ಸಹಾಯಕ ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್ ಬಗ್ಗೆ ಮಾಹಿತಿ ಕೊಟ್ಟವರಿಗೂ 20 ಲಕ್ಷ ರೂ. ನಗದು ಬಹುಮಾನ ಘೋಷಿಸಲಾಗಿದೆ.
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ದಾವೂದ್ ಸಹಚರರಾದ ಹಾಜಿ ಅನೀಸ್ ಅಲಿಯಾಸ್ ಅನೀಸ್ ಇಬ್ರಾಹಿಂ ಶೇಖ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ ಮತ್ತು ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮೊನ್ ಅಲಿಯಾಸ್ ಟೈಗರ್ ಮೆಮೊನ್ ಅವರ ಮಾಹಿತಿ ಕೊಟ್ಟವರಿಗೆ ತಲಾ 15 ಲಕ್ಷ ರೂ. ನಗದು ನೀಡುವುದಾಗಿ ಎನ್ಐಎ ಹೇಳಿದೆ.
ಇದನ್ನೂ ಓದಿ: 'ಹಾಳಾದ ರಸ್ತೆಗಳಲ್ಲಿ ಕಡಿಮೆ ಅಪಘಾತ, ನೀರಲ್ಲಿ ಬೆರೆಸಿ ಸಾರಾಯಿ ಕುಡಿಯಿರಿ': ಛತ್ತೀಸ್‌ಗಢ ಸಚಿವರ ಉವಾಚ
ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ. 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.