ಬೆಂಗಳೂರು: ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿ ಬರುವ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು (CCPA) ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಆಹಾರದ ಬಿಲ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ನಿರ್ಬಂಧಿಸಿದೆ. ಆದ್ದರಿಂದ, ಮುಂದಿನ ಬಾರಿ ಹೋಟೆಲ್ ಅಥವಾ ರೆಸ್ಟೋರೆಂಟ್ ನಿಮ್ಮ ಬಿಲ್‌ಗೆ ಸೇವಾ ಶುಲ್ಕ ಸೇರಿಸಿದರೆ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಡಿ. ಹೀಗೆ ಸೇವಾ ಶುಲ್ಕ ಅಥವಾ ಸರ್ವೀಸ್ ಚಾರ್ಜ್ ಸೇರಿಸುವುದರ ವಿರುದ್ಧ ದೂರು ನೀಡಲು ಈಗ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ನಿಮಗೆ ಅವಕಾಶ ಮಾಡಿಕೊಟ್ಟಿದೆ.
ಸರ್ವೀಸ್ ಚಾರ್ಜ್ ವಿಧಿಸುತ್ತಿರುವ ಬಗ್ಗೆ ದೂರುಗಳ ಹೆಚ್ಚುತ್ತಿರುವ ನಡುವೆ ಸಿಸಿಪಿಎ, ಸೇವಾ ಶುಲ್ಕಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸೇವಾ ಶುಲ್ಕ ಮಾರ್ಗಸೂಚಿಗಳು:
- ಸಿಸಿಪಿಎ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, "ಯಾವುದೇ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ.
- ಬೇರೆ ಯಾವುದೇ ಹೆಸರಿನಿಂದ ಸೇವಾ ಶುಲ್ಕವನ್ನು ಸಂಗ್ರಹಿಸಕೂಡದು.
- ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳು ಸೇವಾ ಶುಲ್ಕವನ್ನು ಪಾವತಿಸಲು ಗ್ರಾಹಕರನ್ನು ಒತ್ತಾಯಿಸುವುಂತಿಲ್ಲ. ಸೇವಾ ಶುಲ್ಕವು ಸ್ವಯಂಪ್ರೇರಿತ, ಐಚ್ಛಿಕ ಮತ್ತು ಗ್ರಾಹಕರ ವಿವೇಚನೆಗೆ ಅನುಗುಣವಾಗಿರುತ್ತದೆ ಎಂದು ಅವರು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕು.
- ಸೇವಾ ಶುಲ್ಕದ ಸಂಗ್ರಹದ ಆಧಾರದ ಮೇಲೆ ಸೇವೆ ನೀಡುವುದು ಅಥವಾ ಯಾವುದೇ ನಿರ್ಬಂಧವನ್ನು ಗ್ರಾಹಕರ ಮೇಲೆ ವಿಧಿಸುವಂತಿಲ್ಲ.
ಗ್ರಾಹಕರು ಏನು ಮಾಡಬಹುದು?
ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಸೇವಾ ಶುಲ್ಕವನ್ನು ವಿಧಿಸುತ್ತಿದ್ದರೆ ಬಿಲ್‌ನ ಮೊತ್ತದಿಂದ ಸೇವಾ ಶುಲ್ಕವನ್ನು ತೆಗೆದುಹಾಕುವಂತೆ ವಿನಂತಿಸಬಹುದು.
ಸಂಬಂಧಪಟ್ಟ ಹೋಟೆಲ್ ಅಥವಾ ರೆಸ್ಟೋರೆಂಟ್ ಮಾಲೀಕರು ಅಥವಾ ಆಡಳಿತದವರು ಸಮಸ್ಯೆಯನ್ನು ಪರಿಹರಿಸದಿದ್ದರೆ, ಗ್ರಾಹಕರು 1915 ಗೆ ಕರೆ ಮಾಡುವ ಮೂಲಕ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಗೆ ದೂರು ಸಲ್ಲಿಸಬಹುದು.
ಎನ್ಸಿಎಚ್ ಮೊಬೈಲ್ ಆಪ್ ಮೂಲಕವೂ ದೂರು ದಾಖಲಿಸಬಹುದು.
ಗ್ರಾಹಕರು ಗ್ರಾಹಕ ಆಯೋಗಕ್ಕೂ ದೂರು ಸಲ್ಲಿಸಬಹುದು. ಇದಾಖಿಲ್ ಪೋರ್ಟಲ್, http://www.edaakhil.nic.in ನಲ್ಲಿಯೂ ದೂರು ಸಲ್ಲಿಸಬಹುದು.