ತಿರುಪತಿ(ಆಂಧ್ರಪ್ರದೇಶ): ಆಕೆ ನೂರೊಂದು ಕನಸುಗಳನ್ನು ಹೊತ್ತು ಮದುವೆ ಮಾಡಿಕೊಂಡಳು. ನೂರಾರು ಕಾಲ ಗಂಡನ ಜೊತೆ ಬಾಳಬೇಕೆಂಬ ಇಚ್ಛೆಯಿಂದ ದಂಪತಿ ದೇವರ ದರ್ಶನಕ್ಕೆ ತೆರಳಿದ್ದರು. ಆದ್ರೆ ವಿಧಿ ಅವರ ಜೀವನದಲ್ಲಿ ಬೇರೆಯದ್ದೇ ಆಟ ಆಡಿದೆ.
ಹೌದು, ಕರ್ನಾಟಕದ ರಾಯಚೂರಿನ ದಂಪತಿಗೆ ಇತ್ತೀಚೆಗೆ ಮದುವೆಯಾಗಿತ್ತು. ನವದಂಪತಿ ತಮ್ಮ ಕುಟುಂಬಸ್ಥರೊಂದಿಗೆ ಟ್ರ್ಯಾಕ್ಸ್ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದಾರೆ. ತಿರುಪತಿಯಲ್ಲಿ ನಿನ್ನೆ(ಶುಕ್ರವಾರ) ರಾತ್ರಿ 1.30ಕ್ಕೆ ಭಾರಿ ಮಳೆಯಾದ ಹಿನ್ನೆಲೆ ವೆಂಗಮಾಂಬ ಕೂಡಲಿ ರೈಲ್ವೆ ಅಂಡರ್ ಪಾಸ್ನಲ್ಲಿ 8 ಅಡಿಗಳಷ್ಟು ಮಳೆ ನೀರು ನಿಂತಿದೆ. ನೀರಿನ ಆಳದ ಬಗ್ಗೆ ಅರಿಯದ ಚಾಲಕ ಟ್ರ್ಯಾಕ್ಸ್ನ್ನು ನಿಂತ ಮಳೆ ನೀರಿನಲ್ಲೇ ನುಗ್ಗಿಸಲು ಪ್ರಯತ್ನಿಸಿದ್ದಾನೆ. ಆದ್ರೆ ವಾಹನ ನೀರಿನ ಮಧ್ಯದಲ್ಲೇ ಸಿಲುಕಿಕೊಂಡಿದೆ.
ಇದನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದರು. ರಕ್ಷಣಾ ಕಾರ್ಯದಲ್ಲಿ ಸ್ಥಳೀಯರು ಆರು ಜನರನ್ನು ಕಾಪಾಡಿದರು. ಆದ್ರೆ ನವವಧು ಸಂಧ್ಯಾ ಮಾತ್ರ ಕಾರಿನಲ್ಲೇ ಸಿಲುಕಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮಗುವೊಂದು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಾಗಿದೆ.