ಬಹ್ರೈಚ್ (ಉತ್ತರ ಪ್ರದೇಶ): ಇತ್ತೀಚೆಗೆ ಮೊದಲ ರಾತ್ರಿಯ ಕೋಣೆಯಲ್ಲಿ ಶವವಾಗಿ ಪತ್ತೆಯಾದ ನವವಿವಾಹಿತ ದಂಪತಿಗಳ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಂಡಿದೆ. ಅವರಿಬ್ಬರ ಸಾವಿಗೆ ಹೃದಯಾಘಾತವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯನ್ನು ಪ್ರತಾಪ್ ಯಾದವ್ (24) ಮತ್ತು ಪುಷ್ಪಾ ಯಾದವ್ (22) ಎಂದು ಗುರುತಿಸಲಾಗಿದೆ.
ಮೇ 30ರಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿತ್ತು. ಕೈಸರ್‌ಗಂಜ್ ಪ್ರದೇಶದಲ್ಲಿ ಮೊದಲ ರಾತ್ರಿಯಂದೇ ನವದಂಪತಿ ಮೊದಲ ರಾತ್ರಿಯ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಇವರಿಬ್ಬರ ಸಾವಿಗೆ ಕಾರಣ ನಿಗೂಢವಾಗಿತ್ತು.
ಮೇ 30ರಂದು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಮೇ 31ರಂದು ಮೊದಲ ರಾತ್ರಿ ಆಚರಣೆಗೆ ಎಂದು ಮನೆಯ ಕೊಠಡಿ ಸೇರಿದ್ದರು. ಮತ್ತೊಂದೆಡೆ, ಸಂಬಂಧಿಕರೆಲ್ಲ ಊಟ ಮಾಡಿ ನಿದ್ದೆಗೆ ಜಾರಿದ್ದರು. ಬೆಳಗಾದರೂ ನವ ದಂಪತಿ ಕೊಠಡಿಯ ಬಾಗಿಲು ತೆರೆದಿಲ್ಲ. ಬಾಗಿಲು ಬಡಿದಾಡಿದರೂ ಯಾವುದೇ ಸದ್ದು ಕೇಳಿ ಬಂದಿಲ್ಲ. ಇದಾದ ಬಳಿಕ ಮನೆಯವರು ಕಿಟಕಿ ಮೂಲಕ ನೋಡಿದಾಗ ಇಬ್ಬರ ಹಾಸಿಗೆಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ತಿಳಿಸಿದ್ದರು.
ಇದರಿಂದ ಆತಂಕದಲ್ಲೇ ಬಾಗಿಲು ಒಡೆದು ಕೊಠಡಿ ಒಳಗೆ ಕುಟುಂಬಸ್ಥರು ಹೋಗಿ ಪರಿಶೀಲನೆ ನಡೆಸಿದಾಗ ಹೊಸ ಜೋಡಿ ಪ್ರತಾಪ್ ಮತ್ತು ಪುಷ್ಪಾ ಇಬ್ಬರ ಉಸಿರು ನಿಂತಿರುವುದು ಪತ್ತೆಯಾಗಿದೆ. ಇದರ ಮಾಹಿತಿ ಪಡೆದ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ದೌಡಾಯಿಸಿದ್ದರು. ನಂತರ ಕುಟುಂಬಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಆಗ ಪ್ರಭಾರಿ ಇನ್ಸ್‌ಪೆಕ್ಟರ್ ರಾಜನಾಥ್ ಸಿಂಗ್ ಮತ್ತು ಪೊಲೀಸ್ ಅಧಿಕಾರಿ ಕಮಲೇಶ್ ಸಿಂಗ್ ಗ್ರಾಮಕ್ಕೆ ಆಗಮಿಸಿ ಪರಿಶೀಲಿಸಿದ್ದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು.
ಸದ್ಯ ಇಬ್ಬರ ಸಾವಿಗೆ ಕಾರಣ ತಿಳಿದು ಬಂದಿದೆ. ಶನಿವಾರ ಸಂಜೆ ಬಂದಿರುವ ಮರಣೋತ್ತರ ಪರೀಕ್ಷೆಯ ವರದಿಯು ನವದಂಪತಿ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ಬಹ್ರೈಚ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ವಿಧಿವಿಜ್ಞಾನ ತಜ್ಞರ ತಂಡವು ದಂಪತಿಯ ಕೊಠಡಿ ಪರೀಕ್ಷಿಸಿದ್ದು, ಕೊಠಡಿಯಲ್ಲಿ ಗಾಳಿಯ ಕೊರತೆ ಮತ್ತು ಸೀಲಿಂಗ್ ಫ್ಯಾನ್ ಇಲ್ಲದಿರುವುದು ಮತ್ತು ಗಾಳಿಯ ಪ್ರಸರಣ ಕೊರತೆಯಿಂದಾಗಿ ಹೃದಯ ಸ್ತಂಭನದ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಬಹಿರಂಗಪಡಿಸಿದೆ ಎಂದು ಎಸ್ಪಿ ಹೇಳಿದರು.
ಎರಡೂ ದೇಹಗಳ ಒಳಾಂಗಗಳನ್ನು ಲಖನೌದಲ್ಲಿರುವ ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ನಾವು ಆಯಾ ಕುಟುಂಬಗಳಿಂದ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಅವರು ಹೇಳಿದರು.
ಮದುವೆಯ ಮೊದಲನೇ ದಿನವೇ ಇಬ್ಬರು ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಈಗ ಸಾವಿನ ಸತ್ಯ ಹೊರಬಿದ್ದಿದ್ದು, ಮರಣೋತ್ತರ ಪರೀಕ್ಷೆ ಬಳಿಕ ನವದಂಪತಿಯ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಗ್ರಾಮದಲ್ಲಿ ಒಂದೇ ಚಿತೆಯ ಮೇಲೆ ದಂಪತಿಯ ಅಂತ್ಯಸಂಸ್ಕಾರ ಮಾಡಲಾಗಿದ್ದು, ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.