ಕೊಲ್ಲಂ(ಕೇರಳ): ಕೆಲವರಿಗೆ ಅದೃಷ್ಟ ಹೇಳಿ ಮಾಡಿದಂತೆ ಒಲಿದಿರುತ್ತೆ. ಕೇರಳದಲ್ಲಿ ಮೊನ್ನೆ ನಡೆದ ಪಂಚಾಯತ್ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದ ಸಜಾದ್ ಸಲೀಂ ಅವರು ಪ್ರಮಾಣ ವಚನ ಸ್ವೀಕರಿಸಿ ಅದೇ ದಿನ ವಿವಾಹವನ್ನೂ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೊಲ್ಲಂ ಜಿಲ್ಲೆಯ ತ್ರಿಕ್ಕೋವಿಲ್ವಟ್ಟಂನಲ್ಲಿ ಪಂಚಾಯತ್ ಸದಸ್ಯರಾಗಿ ಆಯ್ಕೆಯಾದ ಸಜಾದ್ ಸಲೀಂ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು, ಬಳಿಕ ಅಲ್ಲಿಂದ ನೇರವಾಗಿ ನಿಗದಿಯಾಗಿದ್ದ ಅವರ ವಿವಾಹ ಸಮಾರಂಭಕ್ಕೆ ತೆರಳಿದರು.
ಸಜಾದ್ ಅವರ ಮದುವೆ ಕಣ್ಣನಲ್ಲೂರಿನ ಅನ್ಸಿಯೊಂದಿಗೆ ಡಿಸೆಂಬರ್ 22ಕ್ಕೆ ನಿಶ್ಚಯವಾಗಿತ್ತು. ಇದೇ ಸಂದರ್ಭ ಚುನಾವಣೆನೂ ಘೋಷಣೆಯಾಯ್ತು, ಸಜಾದ್ ಕೂಡಾ ಸ್ಪರ್ಧಿಸಿ ಗೆದ್ದರು.
ಇದನ್ನೂ ಓದಿ: ಕ್ರಿಸ್‌ಮಸ್ ರಾಷ್ಟ್ರೀಯ ರಜಾದಿನ ಎಂದು ಏಕೆ ಘೋಷಿಸಲಿಲ್ಲ: ಕೆಂದ್ರವನ್ನು ಪ್ರಶ್ನಿಸಿದ ಮಮತಾ ಬ್ಯಾನರ್ಜಿ
ಕಾಕತಾಳೀಯ ಎಂಬತೆ ಅವರ ಪ್ರಮಾಣವಚನ ಸಮಾರಂಭ ಹಾಗೂ ಮದುವೆ ಎರಡೂ ಒಂದೇ ದಿನ ನಡೆದಿದ್ದರಿಂದ ಸಜಾದ್ ಸಂತೋಷಗೊಂಡಿದ್ದಾರೆ. ತ್ರಿಕ್ಕೋವಿಲ್ವಟ್ಟಂನಲ್ಲಿರುವ ತನ್ನ ಮತದಾರರಿಗೆ ಧನ್ಯವಾದ ಹೇಳುವ ಮೂಲಕ ಸಜಾದ್ ಪ್ರಮಾಣವಚನ ಸ್ವೀಕರಿಸಿ, ಬಳಿಕ ಪಂಚಾಯತ್ನ ಎಲ್ಲ ಹಿರಿಯರ ಆಶೀರ್ವಾದ ಪಡೆದು ಬಳಿಕ ವಿವಾಹ ಸಮಾರಂಭದಲ್ಲಿ ಭಾಗಿಯಾದರು.
ಕೋವಿಡ್ ಪ್ರೋಟೋಕಾಲ್ ಅನುಸರಿಸಿ ಅವರ ಕುಟುಂಬ ಸದಸ್ಯರ ಮುಂದೆ ಮದುವೆ ಸಮಾರಂಭ ನಡೆಯಿತು. ತಾನು ರಾಜಕಾರಣಿ ಮತ್ತು ಸಮಾಜ ಸೇವಕನೆಂದು ಸಜಾದ್ ಈ ಹಿಂದೆ ಹೇಳಿದ್ದ. ತಾನು ಅದನ್ನು ಇಷ್ಟಪಡುತ್ತೇನೆಂದು ವಧು ಅನ್ಸಿ ಹೇಳಿ ಸಂತೋಷ ವ್ಯಕ್ತಪಡಿಸಿದ್ದಾರೆ.