ನವದೆಹಲಿ: ಫೇಸ್ಬುಕ್ ಒಡೆತನದ ಮೆಸೇಜಿಂಗ್ ಕಂಪನಿ ವಾಟ್ಸ್ಆ್ಯಪ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹೊಸ ಬ್ಯುಸಿನೆಸ್ ಟೂಲ್ಗಳನ್ನು ಅಪ್ಡೇಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದೆ. ಹೊಸ ಲಿಸ್ಟ್ ಮೆಸೇಜ್ ಸೌಲಭ್ಯದ ಮೂಲಕ ಈಗ ಗ್ರಾಹಕರು ಏಕಕಾಲಕ್ಕೆ 10 ಆಪ್ಷನ್ಗಳ ಮೆನು ಪಡೆಯಲಿದ್ದು, ಪ್ರತಿಕ್ರಿಯೆಯನ್ನು ಪದೇ ಪದೆ ಟೈಪ್ ಮಾಡುವ ಸಮಸ್ಯೆ ತಪ್ಪಲಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
"ಹೊಸ ರಿಪ್ಲೈ ಬಟನ್ ಮೂಲಕ ಬಳಕೆದಾರರು, ಒಂದು ಟ್ಯಾಪ್ನಿಂದ ಶೀಘ್ರವಾಗಿ ಟಾಪ್ 3 ಆಯ್ಕೆಗಳನ್ನು ಆಯ್ದುಕೊಳ್ಳಬಹುದಾಗಿದೆ. ಇದು ವಾಟ್ಸ್ಆ್ಯಪ್ ಬ್ಯುಸಿನೆಸ್ ಅಕೌಂಟ್ ಬಳಕೆದಾರರಿಗೆ ಲಭ್ಯವಾಗಲಿದೆ." ಎಂದು ಕಂಪನಿ F8 ವರ್ಚುಯಲ್ ಸಮಾವೇಶದಲ್ಲಿ ಘೋಷಿಸಿದೆ.
ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಲಿಸ್ಟ್ ಆಗಿರುವ 8 ಮಿಲಿಯನ್ ಬ್ಯುಸಿನೆಸ್ ಕ್ಯಾಟಲಾಗ್ಗಳನ್ನು ಬ್ರೌಸ್ ಮಾಡಬಹುದು ಹಾಗೂ ಇದರಲ್ಲಿ 1 ಮಿಲಿಯನ್ ಬ್ಯುಸಿನೆಸ್ ಕ್ಯಾಟಲಾಗ್ಗಳು ಭಾರತದ್ದಾಗಿವೆ ಎಂದು ಕಂಪನಿ ಏಪ್ರಿಲ್ನಲ್ಲಿ ಹೇಳಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬ್ಯುಸಿನೆಸ್ ಅಕೌಂಟ್ಗಳಿಗಾಗಿ ಮತ್ತಷ್ಟು ಫೀಚರ್ಗಳನ್ನು ಸೇರಿಸಲಾಗುತ್ತಿದೆ.
ವಿಶ್ವಾದ್ಯಂತ ನಿತ್ಯ 50 ಮಿಲಿಯನ್ ಬ್ಯುಸಿನೆಸ್ ಹಾಗೂ 175 ಮಿಲಿಯನ್ ಜನ ವೈಯಕ್ತಿಕ ಸಂದೇಶ ಕಳುಹಿಸಲು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ.
"ಹೊಸ ಫೀಚರ್ಗಳಿಂದ ವ್ಯಾಪಾರಸ್ಥರು ಸುಲಭವಾಗಿ ವಾಟ್ಸ್ಆ್ಯಪ್ ಮೇಲೆ ನೋಂದಾಯಿಸಿಕೊಳ್ಳಬಹುದು ಹಾಗೂ ತಮ್ಮ ಗ್ರಾಹಕರೊಂದಿಗೆ ಮತ್ತಷ್ಟು ಸುಲಭವಾಗಿ ವ್ಯವಹರಿಸಬಹುದು." ಎಂದು ಗುಪ್ಶುಪ್ ಮೆಸೇಜಿಂಗ್ ಸಂಸ್ಥೆಯ ಸಿಒಒ ರವಿ ಸುಂದರಂ ಹೇಳಿದ್ದಾರೆ.