ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್ನಲ್ಲಿ ಶನಿವಾರ ಬೆಳಗ್ಗೆ ನಡೆದ ಮೂರು ಅಂತಸ್ತಿನ ಕಟ್ಟಡದ ಅಗ್ನಿ ದುರಂತಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ತನ್ನನ್ನು ಮದುವೆಯಾಗಲು ತಿರಸ್ಕರಿಸಿದ ಮಹಿಳೆ ಮೇಲಿನ ಕೋಪಕ್ಕೆ ಪ್ರಿಯಕರನೋರ್ವ ಮಾಡಿದ ದುಷ್ಕೃತ್ಯಕ್ಕೆ ಏಳು ಜನರು ಪ್ರಾಣ ಕಳೆದುಕೊಂಡಿರುವುದು ಖಚಿತವಾಗಿದೆ. ಈ ಘಟನೆಗೆ ಕಾರಣವಾದ ಆರೋಪಿ ಶುಭಂ ದೀಕ್ಷಿತ್ ಎಂಬಾತನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇಲ್ಲಿನ ವಿಜಯ ನಗರದಲ್ಲಿ ಶನಿವಾರ ಬೆಳಗ್ಗೆ ಹೊತ್ತಿಕೊಂಡ ಬೆಂಕಿಯಲ್ಲಿ ಏಳು ಜನರು ಸಜೀವ ದಹನವಾಗಿದ್ದರು. ಇದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಲಾಗಿದ್ದು, ಇದರಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ.
ಮದುವೆ ಪ್ರಸ್ತಾಪ ತಿರಸ್ಕರಿಸಿದ್ದ ಮಹಿಳೆ: ಆರೋಪಿ ಶುಭಂ ದೀಕ್ಷಿತ್ ಮೂಲತಃ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ನಿವಾಸಿ. ಕಳೆದ ಎರಡು ತಿಂಗಳಿಂದ ಇಂದೋರ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ವೇಳೆ ಮಹಿಳೆಯೊಬ್ಬಳನ್ನು ಇಷ್ಟಪಟ್ಟು ಆಕೆಗೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ, ಆಕೆ ಇದನ್ನು ತಿರಸ್ಕರಿಸಿ ಬೇರೊಬ್ಬನನ್ನು ಮದುವೆಯಾಗಿದ್ದಳು. ಇದು ದೀಕ್ಷಿತ್ ಸಿಟ್ಟಿಗೆ ಕಾರಣವಾಗಿತ್ತು.
ಈ ಮಹಿಳೆ ತನ್ನ ಗಂಡನೊಂದಿಗೆ ವಿಜಯ ನಗರದ ಈ ಮೂರಂತಸ್ತಿನ ಕಟ್ಟಡದಲ್ಲಿ ವಾಸವಿದ್ದಳು. ಅಂತೆಯೇ ಶನಿವಾರ ಕಟ್ಟಡದ ಪಾರ್ಕಿಂಗ್ ಸ್ಥಳಕ್ಕೆ ನುಗ್ಗಿ ಆಕೆಯ ಸ್ಕೂಟರ್ಗೆ ಬೆಂಕಿ ಹಚ್ಚಿದ್ದಾನೆ. ಆಗ ಇಡೀ ಕಟ್ಟಡಕ್ಕೆ ಬೆಂಕಿ ಹಬ್ಬಿರುವುದು ಸಿಸಿಟಿವಿ ಪರಿಶೀಲನೆ ವೇಳೆ ಬಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರಿ ಅಗ್ನಿ ಅವಘಡ: ಏಳು ಮಂದಿ ಸಜೀವ ದಹನ!