ನವದೆಹಲಿ : 2030 ರ ವೇಳೆಗೆ ಭಾರತದ ಸರಕು ರಫ್ತು ಪ್ರಮಾಣವನ್ನು 2 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿಯೊಂದಿಗೆ 2023 ರಿಂದ 2028 ರ ಅವಧಿಗೆ ಹೊಸ ವಿದೇಶಿ ವ್ಯಾಪಾರ ನೀತಿಯನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಲ್ಲಿನ ಏರಿಳಿತ ಮತ್ತು ಪೂರೈಕೆ ಸರಪಳಿಗಳಲ್ಲಿನ ಅಡ್ಡಿಗಳಿಂದ ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮವಾಗಿರುವ ಮಧ್ಯೆಯೂ ಕೇಂದ್ರ ಸರ್ಕಾರ ಧನಾತ್ಮಕ ಗುರಿಯನ್ನು ಅಳವಡಿಸಿಕೊಂಡಿದೆ. ಉದ್ಯಮ ಪ್ರತಿನಿಧಿಗಳು ಮತ್ತು ಸಚಿವಾಲಯದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ವಿದೇಶಿ ವ್ಯಾಪಾರ ನೀತಿಯನ್ನು ಅನಾವರಣಗೊಳಿಸಿದರು.
2030 ರ ವೇಳೆಗೆ ಭಾರತದ ರಫ್ತು ವ್ಯಾಪಾರವು 2 ಟ್ರಿಲಿಯನ್ ಡಾಲರ್ ತಲುಪಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ನೀತಿ ಅನಾವರಣಗೊಳಿಸಿದ ನಂತರ ಗೋಯಲ್ ಹೇಳಿದರು. ಹೊಸ ವಿದೇಶಿ ವ್ಯಾಪಾರ ನೀತಿಯು ಭಾರತೀಯ ರೂಪಾಯಿಯಲ್ಲಿ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಉತ್ತೇಜನ ನೀಡಲಿದೆ. ಕರೆನ್ಸಿ ವೈಫಲ್ಯ ಅಥವಾ ಡಾಲರ್ ಕೊರತೆ ಎದುರಿಸುತ್ತಿರುವ ದೇಶಗಳೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಮಾಡಲು ಭಾರತ ಸಿದ್ಧವಿದೆ ಎಂಬುದು ನೀತಿಯ ಸಾರವಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬಾರ್ಥವಾಲ್ ಹೇಳಿದ್ದಾರೆ.
ಹೊಸ ವ್ಯಾಪಾರ ನೀತಿಯು 2028 ರವರೆಗೆ ಜಾರಿಯಲ್ಲಿರುತ್ತದೆ ಎಂದು ನಿರೀಕ್ಷಿಸಲಾಗಿದ್ದರೂ, ಈ ಸಂದರ್ಭದಲ್ಲಿ ಮಾತನಾಡಿದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ಡಿಜಿ (ಡಿಜಿಎಫ್‌ಟಿ) ಸಂತೋಷ್ ಸಾರಂಗಿ, ಹೊಸ ವಿದೇಶಿ ವ್ಯಾಪಾರ ನೀತಿಗೆ ಯಾವುದೇ ಅಂತಿಮ ದಿನಾಂಕವಿಲ್ಲ ಮತ್ತು ಅದನ್ನು ಅಗತ್ಯ ಬಿದ್ದಾಗ ಪರಿಷ್ಕರಿಸಲಾಗುತ್ತದೆ ಎಂದು ಹೇಳಿದರು.
ವಿದೇಶಿ ವ್ಯಾಪಾರ ನೀತಿ ಬಿಡುಗಡೆ ಸಮಾರಂಭದಲ್ಲಿ ವಿಷಯ ಮಂಡನೆ ಮಾಡಿದ ವಾಣಿಜ್ಯ ಸಚಿವಾಲಯ, ಡಬ್ಲ್ಯುಟಿಒದ ಜಾಗತಿಕ ವ್ಯಾಪಾರ ಮುನ್ಸೂಚನೆಯು 2023 ರಲ್ಲಿ ಜಾಗತಿಕ ವ್ಯಾಪಾರದಲ್ಲಿ ಶೇಕಡಾ ಒಂದರಷ್ಟು ನಿಧಾನಗತಿಯ ಮುನ್ಸೂಚನೆ ನೀಡಿದೆ. ಮಾರ್ಚ್ 2023 ರ ವೇಳೆಗೆ ಭಾರತದ ನಾಮಿನಲ್ ಜಿಡಿಪಿ ಸುಮಾರು 3.5 ಟ್ರಿಲಿಯನ್ ಡಾಲರ್ ಆಗಲಿದೆ ಎಂದು ಮಾಹಿತಿ ನೀಡಿತು.
ಭಾರತವು 2022-23ರಲ್ಲಿ 765 ಶತಕೋಟಿ ಮೌಲ್ಯದ ಸರಕು ರಫ್ತು ಮಾಡುವ ಸಾಧ್ಯತೆಯಿದೆ ಎಂದು ಸಾರಂಗಿ ಹೇಳಿದರು. ಹೊಸ ನೀತಿಯ ಅಡಿಯಲ್ಲಿ ಡೈರಿ ವಲಯಕ್ಕೆ ಸರಾಸರಿ ರಫ್ತು ಬಾಧ್ಯತೆಯ ನಿಯಮದಿಂದ ವಿನಾಯಿತಿ ನೀಡಲಾಗಿದೆ. ವಿಶೇಷ ಮುಂಗಡ ಅಧಿಕಾರ ಯೋಜನೆಯನ್ನು ಉಡುಪು ಮತ್ತು ಬಟ್ಟೆ ವಲಯಕ್ಕೆ ವಿಸ್ತರಿಸಲಾಗಿದೆ ಎಂದು ಡಿಜಿಎಫ್‌ಟಿ ಹೇಳಿದೆ.
ಕೊರಿಯರ್ ಸೇವೆಗಳ ಮೂಲಕ ರಫ್ತು ಮಾಡುವ ಮೌಲ್ಯದ ಮಿತಿಯನ್ನು ಪ್ರತಿ ರವಾನೆಗೆ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿದೇಶಿ ವ್ಯಾಪಾರ ನೀತಿಯು ಇಕಾಮರ್ಸ್ ರಫ್ತುಗಳನ್ನು ಉತ್ತೇಜಿಸಲಿದೆ. ಇಕಾಮರ್ಸ್ ರಫ್ತು 2023 ರ ವೇಳೆಗೆ 200-300 ಶತಕೋಟಿ ಡಾಲರ್ಗೆ ಬೆಳೆಯುವ ನಿರೀಕ್ಷೆಯಿದೆ. 2021-22ರಲ್ಲಿ 676 ಶತಕೋಟಿ ಡಾಲರ್ ಮೌಲ್ಯದ ರಫ್ತುಗಳಿಗೆ ಹೋಲಿಸಿದರೆ ಭಾರತವು 2022-23ರಲ್ಲಿ 760 ಶತಕೋಟಿ ಡಾಲರ್ ಮೌಲ್ಯದ ರಫ್ತು ವಹಿವಾಟು ನಡೆಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಮಾಂಸ ಉತ್ಪಾದನೆ, ರಫ್ತು ಕಂಪೆನಿಗಳ ಮೇಲೆ ಐಟಿ ದಾಳಿ: ₹1,200 ಕೋಟಿ ಕಪ್ಪುಹಣ ಪತ್ತೆ