ನವದೆಹಲಿ: ಕೋವಿಡ್(COVID) ಆರ್ಭಟ ತಣ್ಣಗಾಗಿದೆ ಎಂದು ಜನರು ನಿಟ್ಟುಸಿರು ಬಿಡುತ್ತಿರುವ ವೇಳೆಗೆ ಮತ್ತೊಂದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೊರೊನಾ ವೈರಸ್ನ ಡೆಲ್ಟಾ ರೂಪಾಂತರದ ಹೊಸ ತಳಿ 'AY.4.2' ಇಂಗ್ಲೆಂಡ್ನಲ್ಲಿ ಪತ್ತೆಯಾಗಿದೆ ಎಂದು ಬ್ರಿಟನ್ ಆರೋಗ್ಯ ಇಲಾಖೆ ತಿಳಿಸಿದೆ.
AY.4.2 - ಇದನ್ನು 'ಡೆಲ್ಟಾ ಪ್ಲಸ್' ಎಂದು ಕರೆಯಲಾಗುತ್ತಿದ್ದು, ಡೆಲ್ಟಾ ರೂಪಾಂತರಕ್ಕಿಂತಲೂ ಕೊರೊನಾ ವೈರಸ್ ಹರಡುವ ಪ್ರಬಲ ತಳಿ ಎಂಬುದಕ್ಕೆ ಇನ್ನೂ ಯಾವುದೇ ಪುರಾವೆ ಇಲ್ಲ. ಆದರೆ ಇದು ವೇಗವಾಗಿ ಹರಡುತ್ತಿರುವುದರಿಂದ ಏಷ್ಯಾ, ಯುರೋಪ್ನ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೋವಿಡ್ ತಲ್ಲಣ.. ಒಂದೇ ದಿನದಲ್ಲಿ 666 ಮಂದಿ ಬಲಿ
ಈ ಹೊಸ ತಳಿಯು ಎಷ್ಟು ಅಪಾಯಕಾರಿಯಾಗಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೂ, ಇದು ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳಂತಹ ದೊಡ್ಡ ರೀತಿಯ ಅಪಾಯಕಾರಿ ತಳಿಯಾಗಿ ಹೊರಹೊಮ್ಮುವ ಸಾಧ್ಯತೆಯಿಲ್ಲ. ಪ್ರಸ್ತುತ ಬಹಳಷ್ಟು ಜನರು ಲಸಿಕೆ ಪಡೆದಿರುವುದದಿಂದ AY.4.2 ವಿರುದ್ಧ ಹೋರಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೋವಿಡ್ ಕೇಸ್ಗಳಲ್ಲಿ ಇಳಿಕೆ ಕಂಡಿದ್ದ ಇಂಗ್ಲೆಂಡ್ನಲ್ಲಿ ಮೊನ್ನೆ ಒಂದೇ ದಿನದಲ್ಲಿ 52,009 ಪ್ರಕರಣಗಳು ವರದಿಯಾಗಿವೆ. ಮೂರು ತಿಂಗಳ ಬಳಿಕ ಸೋಂಕಿತರ ಸಂಖ್ಯೆ ಶೇ.14ರಷ್ಟು ಏರಿಕೆಯಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಯುಕೆ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.