ನವದೆಹಲಿ : ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಾಕಷ್ಟು ನಷ್ಟ ಉಂಟಾಗಿದ್ದರೂ ಕೂಡ ಭಾರತದಲ್ಲಿ ಉದ್ಯಮಶೀಲತೆಯ ಮನೋಭಾವ ಮಾತ್ರ ಕಡಿಮೆಯಾಗಿಲ್ಲ. ಕಳೆದ ತಿಂಗಳು ಕೊನೆಯಾದ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ದಾಖಲೆಯ 1,67,000 ಹೊಸ ಕಂಪನಿಗಳನ್ನು ನೋಂದಾಯಿಸಲಾಗಿದೆ. ಈ ಮೂಲಕ ಕೋವಿಡ್ ಸಾಂಕ್ರಾಮಿಕ ಭಾರತೀಯ ಉದ್ಯಮಶೀಲತೆಯ ಮೇಲೆ ದುಷ್ಪರಿಣಾಮ ಬೀರುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ.
2020-21ರ ಆರ್ಥಿಕ ವರ್ಷದಲ್ಲಿ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಹರಡದಂತೆ ತಡೆಯಲು ಕಟ್ಟುನಿಟ್ಟಾದ ಲಾಕ್ಡೌನ್ ಅನ್ನು ವಿಧಿಸಿದ ಕಾರಣದಿಂದಾಗಿ ಹಾನಿ ತಪ್ಪಿತ್ತು. ಈ ವೇಳೆ ನೋಂದಣಿಗೊಂಡ ಕಂಪನಿಗಳ ಸಂಖ್ಯೆಯು ಹಿಂದಿನ ವರ್ಷಕ್ಕಿಂತ ಅಧಿಕವಾಗಿದೆ. ಸುಮಾರು ಶೇ.8ರಷ್ಟು ಹೆಚ್ಚಳ ಕಂಡಿತ್ತು ಎಂದು ಸರ್ಕಾರ ಹೇಳಿಕೊಂಡಿತ್ತು.
2018-19ರಲ್ಲಿ ಭಾರತದಲ್ಲಿ ಕೇವಲ 1,22,000 ಹೊಸ ಕಂಪನಿಗಳು ಮತ್ತು 2019-20ರ ಹಣಕಾಸು ವರ್ಷದಲ್ಲಿ 1,24,000 ಹೊಸ ಕಂಪನಿಗಳು ನೋಂದಣಿಯಾಗಿದ್ದವು. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಹೊಸ ಕಂಪನಿಗಳ ನೋಂದಣಿಯೊಂದಿಗೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿ ನೋಂದಣಿಯಾದ ಕಂಪನಿಗಳು ಹೆಚ್ಚಿವೆ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ಗೆ (Ease Of Doing Business) ಕೇಂದ್ರ ಸರ್ಕಾರವು ಒತ್ತು ನೀಡಿದ್ದರಿಂದ ಹೊಸ ಕಂಪನಿಗಳ ನೋಂದಣಿ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಚ್ 2020ರಲ್ಲಿ ಮೊದಲ ರಾಷ್ಟ್ರೀಯ ಲಾಕ್‌ಡೌನ್‌ಗೆ ಮೊದಲು, ಸರ್ಕಾರವು ಫೆಬ್ರವರಿ 2020ರಲ್ಲಿ SPICe+ (Simplified Proforma for Incorporating Company electronically Plus) ಫಾರ್ಮ್‌ಗಳನ್ನು ಪ್ರಾರಂಭಿಸಿತು. ಮಹಾರಾಷ್ಟ್ರ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳ ಮತ್ತು ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಕಾರ್ಮಿಕ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಲ್ಲಿ 11 ವಿಭಿನ್ನ ಸೇವೆಗಳನ್ನು ನೀಡಲಾಗಿತ್ತು. ಇದೂ ಕೂಡ ಕಂಪನಿಗಳನ್ನ ಆರಂಭಿಸಲು ಹೆಚ್ಚು ಅವಕಾಶ ನೀಡಿತು.
ಕರ್ನಾಟಕದಲ್ಲಿ 13,403 ಕಂಪನಿಗಳ ನೋಂದಣಿ : ಕಂಪನಿಯ ಹೆಸರು ಕಾಯ್ದಿರಿಸುವಿಕೆ, ಕಂಪನಿ ಸಂಯೋಜನೆ, ನಿರ್ದೇಶಕ ಗುರುತಿನ ಸಂಖ್ಯೆ, ಇಪಿಎಫ್ಒ ನೋಂದಣಿ ಸಂಖ್ಯೆ, ಇಎಸ್ಯುಸಿ ನೋಂದಣಿ ಸಂಖ್ಯೆ, ಪ್ಯಾನ್ ಸಂಖ್ಯೆ, ಟ್ಯಾನ್ ಸಂಖ್ಯೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗಿತ್ತು. 2021-22ರ ಹಣಕಾಸು ವರ್ಷದಲ್ಲಿ ಮಹಾರಾಷ್ಟ್ರದಿಂದ 31,107 ಕಂಪನಿಗಳನ್ನು ನೋಂದಾಯಿಸಲಾಗಿದೆ.
ಈ ಮೂಲಕ ಹೆಚ್ಚು ಕಂಪನಿಗಳನ್ನು ಹೊಸದಾಗಿ ನೋಂದಾಯಿಸಿದ ಕೀರ್ತಿಗೆ ಮಹಾರಾಷ್ಟ್ರ ಭಾಜನವಾಗಿದೆ. ಉತ್ತರಪ್ರದೇಶ-16,969 ಕಂಪನಿಗಳು, ದೆಹಲಿ-16,323 ಕಂಪನಿಗಳು, ಕರ್ನಾಟಕ-13,403 ಕಂಪನಿಗಳು ಮತ್ತು ತಮಿಳುನಾಡು-11,020 ಕಂಪನಿಗಳು ನೋಂದಣಿಗೊಂಡಿವೆ. ವ್ಯಾಪಾರ ಸೇವೆಗಳಲ್ಲಿ 44,168 ಕಂಪನಿಗಳು, ಉತ್ಪಾದನಾ ವಲಯದಲ್ಲಿ 34,640 ಕಂಪನಿಗಳು, ಸಮುದಾಯ-ವೈಯಕ್ತಿಕ ಮತ್ತು ಸಾಮಾಜಿಕ ಸೇವೆಗಳ ವಲಯದಲ್ಲಿ 23,416 ಕಂಪನಿಗಳು ಮತ್ತು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳ ವಿಭಾಗದಲ್ಲಿ 13,387 ಕಂಪನಿಗಳು ನೋಂದಣಿಗೊಂಡಿವೆ.
ಇದನ್ನೂ ಓದಿ: ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕತೆ ಮೇಲೆ ದುಷ್ಪರಿಣಾಮ: 18 ರಾಜ್ಯಗಳಲ್ಲಿ ವಿತ್ತೀಯ ಕೊರತೆ