ನವದೆಹಲಿ: ಕಳೆದ ವಾರ ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರೋನ್ ಪತ್ತೆಯಾದ ಬಳಿಕ ಇದೀಗ ಅಲ್ಲಿ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದೇ ದಿನದಲ್ಲಿ ದ್ವಿಗುಣಗೊಂಡಿರುವ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಒಮಿಕ್ರೋನ್ ಕೇಸ್ ಸೇರಿದಂತೆ ಮೊನ್ನೆ ಮಂಗಳವಾರ ಸುಮಾರು 4,373 ಕೊರೊನಾ ಕೇಸ್ಗಳು ದಕ್ಷಿಣ ಆಫ್ರಿಕಾದಲ್ಲಿ ವರದಿಯಾಗಿತ್ತು. ಆದರೆ, ಬುಧವಾರ ಈ ಸಂಖ್ಯೆ 8,561ಕ್ಕೆ ಹೆಚ್ಚಳವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಲ್ಲಿ ಒಮಿಕ್ರೋನ್ ಪ್ರಕರಣಗಳು ಎಷ್ಟೆಂದು ನಿಖರ ಮಾಹಿತಿಯಿಲ್ಲವಾದರೂ ಬಹುಪಾಲು ಹೊಸ ರೂಪಾಂತರಿಯೇ ಆಗಿರುವ ಸಾಧ್ಯತೆ ಹೆಚ್ಚಿದೆ.
ಕನಿಷ್ಠ 24 ದೇಶಗಳಿಗೆ ಹೊಸ ರೂಪಾಂತರಿ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದ್ದು, ದಕ್ಷಿಣ ಆಫ್ರಿಕಾದಲ್ಲಿನ ಒಮಿಕ್ರೋನ್ ಪೀಡಿತ ಪ್ರದೇಶಗಳಿಂದ ಪ್ರಯಾಣ ಬೆಳೆಸಿದವರ ಹೆಸರುಗಳನ್ನು ಹಸ್ತಾಂತರಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಅಮೆರಿಕ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಒಮಿಕ್ರೋನ್ ಪ್ರಕರಣ ವರದಿಯಾದ ಬೆನಲ್ಲೇ ವಿಶ್ವದ ದೊಡ್ಡಣ್ಣ ಕಠಿಣ ಕ್ರಮ ಕೈಗೊಳ್ಳುತ್ತಿದೆ.
'ಕೆಟ್ಟದ್ದಕ್ಕೆ ಸಿದ್ಧರಾಗಿ'
"ಸಂಪೂರ್ಣವಾಗಿ ಲಸಿಕೆ ಪಡೆದವರು ಒಮಿಕ್ರೋನ್ನಿಂದ ರಕ್ಷಿಸಕೊಳ್ಳಬಹುದೆಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಆರೋಗ್ಯವಂತ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವುದಿಲ್ಲ ಅಥವಾ ಸಾವಿನಿಂದ ಪಾರಾಗುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಅನೇಕ ಬಡ ಪ್ರದೇಶಗಳಲ್ಲಿನ ದುರ್ಬಲ ಜನರು ಇನ್ನೂ ಲಸಿಕೆಯನ್ನು ಹಾಕಿಸಿಕೊಂಡಿಲ್ಲ. ಸಮಯದ ವಿರುದ್ಧ ಓಟ. ಕೆಟ್ಟದ್ದಕ್ಕೆ ಸಿದ್ಧರಾಗಿ, ಒಳ್ಳೆಯದಕ್ಕಾಗಿ ಆಶಿಸಿ" ಎಂದು ಯುರೋಪಿಯನ್ ಒಕ್ಕೂಟದ ಕಾರ್ಯನಿರ್ವಾಹಕ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಮೊದಲ 'ಒಮಿಕ್ರೋನ್' ಪ್ರಕರಣ ಪತ್ತೆ
ಯಾವ್ಯಾವ ರಾಷ್ಟ್ರಗಳಲ್ಲಿ ಒಮಿಕ್ರೋನ್ ವರದಿ?
ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರೋನ್, ಇದಿಗ ಬ್ರಿಟನ್, ಆಸ್ಟ್ರೇಲಿಯಾ, ಇಟಲಿ, ಜರ್ಮನಿ, ನೆದರ್ಲ್ಯಾಂಡ್ಸ್, ಸ್ವಿಜರ್ಲ್ಯಾಂಡ್, ಕೆನಡಾ, ಬೆಲ್ಜಿಯಂ, ಬೋಟ್ಸ್ವಾನಾ, ಹಾಂಕಾಂಗ್, ಇಸ್ರೇಲ್, ಜಪಾನ್, ಅಮೆರಿಕ, ಘಾನಾ, ನೈಜೀರಿಯಾ, ನಾರ್ವೆ, ಸೌದಿ ಅರೇಬಿಯಾ ಮತ್ತು ದಕ್ಷಿಣ ಕೊರಿಯಾ ಸೇರಿ 24 ದೇಶಗಳಲ್ಲಿ ಪತ್ತೆಯಾಗಿದೆ.