ಚಂಡೀಗಢ(ಪಂಜಾಬ್): ಭಗವಂತ್ ಮಾನ್ ಸಿಂಗ್ ನೇತೃತ್ವದ ಪಂಜಾಬ್ ಸಚಿವ ಸಂಪುಟ ಶನಿವಾರ ರಚನೆಯಾಗಿದ್ದು, 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ 8 ಮಂದಿ ಮೊದಲ ಬಾರಿಗೆ ಶಾಸಕರಾದವರಿಗೆ ಸಿಎಂ ಮಾನ್ ಬಂಪರ್ ಆಫರ್ ನೀಡಿದ್ದಾರೆ. ಈ 8 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.
ಪಂಜಾಬ್ ನೂತನ ಕ್ಯಾಬಿನೆಟ್ನಲ್ಲಿ ನಾಲ್ವರು ಜಾಟ್ ಸಿಖ್ಖರು ಇದ್ದು, ಮೂವರು ಹಿಂದೂಗಳು, ಸಿಎಂ ಸೇರಿದಂತೆ ನಾಲ್ವರು ದಲಿತರು ಇದ್ದಾರೆ. ವಿಶೇಷವೆಂದರೆ ಇಬ್ಬರು ವೈದ್ಯರು ಹಾಗೂ ಓರ್ವ ನಿವೃತ್ತ ಅಧಿಕಾರಿ ಕೂಡ ಸಚಿವ ಸ್ಥಾನ ಪಡೆದಿದ್ದಾರೆ. ಪಂಜಾಬ್ ಸಂಪುಟದಲ್ಲಿ ಏಕೈಕ ಮಹಿಳೆಗೆ ಸಚಿವ ಸ್ಥಾನ ಒಲಿದಿದ್ದು, ಡಾ. ಬಲ್ಜಿತ್ ಕೌರ್ಗೆ ಮಣೆ ಹಾಕಲಾಗಿದೆ. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಕಳೆದ 18 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ಇದನ್ನೂ ಓದಿ: ಪಂಜಾಬ್ ಅಡ್ವೊಕೇಟ್ ಜನರಲ್ ಆಗಿ ಅನ್ಮೋಲ್ ಸಿಧು.. ವೇತನ ಮಾದಕ ವ್ಯಸನಿಗಳ ಚಿಕಿತ್ಸೆಗೆ ನೀಡಲು ನಿರ್ಧಾರ
ಭಗವಂತ್ ಮಾನ್ ಕ್ಯಾಬಿನೆಟ್ನಲ್ಲಿ ಹರ್ಪಲ್ ಸಿಂಗ್ ಚೀಮಾ, ಡಾ. ಬಲ್ಜಿತ್ ಕೌರ್, ಹರ್ಭಜನ್ ಸಿಂಗ್ ಇಟಿಒ, ಡಾ, ವಿಯಜ್ ಸಿಂಗ್ಲಾ, ಗರ್ಮಿರ್ ಸಿಂಗ್, ಹರ್ಜೋತ್ ಸಿಂಗ್, ಲಾಲ್ ಚಂದ್, ಕುಲ್ದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲಾರ್, ಭ್ರಮ್ ಶಂಕರ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಉಳಿದಂತೆ ಇನ್ನೂ ಏಳು ಶಾಸಕರಿಗೆ ಸಚಿವಗಿರಿ ಸಿಗುವ ಸಾಧ್ಯತೆ ಇದೆ.
ನೂತನ ಸಚಿವರೊಂದಿಗೆ ಶನಿವಾರ ಚೊಚ್ಚಲ ಕ್ಯಾಬಿನೆಟ್ ಸಭೆ ನಡೆಸಿರುವ ಭಗವಂತ್ ಮಾನ್, 25 ಸಾವಿರ ಸರ್ಕಾರಿ ಹುದ್ದೆ ಭರ್ತಿ ಮಾಡಿಕೊಳ್ಳುವ ಅನುಮೋದನೆಗೆ ಅಂಕಿತ ಹಾಕಿದ್ದಾರೆ. ಇದರ ಜೊತೆಗೆ ಪಂಜಾಬ್ ಅಡ್ವೊಕೇಟ್ ಜನರಲ್ ಆಗಿ ಅನ್ಮೋಲ್ ಸಿಧು ಅವರನ್ನ ನೇಮಕ ಮಾಡಲಾಗಿದೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಚೊಚ್ಚಲ ಸಲ ಪಂಜಾಬ್ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.