ಅಮೃತಸರ(ಪಂಜಾಬ್): ಹೆಣ್ಣು ಮಗು ಜನಿಸಿದರೆ ಮನೆಗೆ ಲಕ್ಷ್ಮಿ ಬಂದಂತೆ ಎಂದು ಹೇಳುತ್ತಾರೆ. ಆದರೂ ಕೆಲವರು ಹೆಣ್ಣು ಮಗುವೆಂದು ಹೀಯಾಳಿಸಿ, ಹೊಟ್ಟೆಯಲ್ಲೇ ಭ್ರೂಣವನ್ನು ಕೊಂದು ಹಾಕುವ ಕೆಟ್ಟ ಮನಸ್ಸಿನವರಿದ್ದಾರೆ. ಆದರೆ ಇಲ್ಲೊಂದು ಜೋಡಿ ತಮ್ಮ ಮುದ್ದು ಕಂದಮ್ಮನನ್ನು ವಿಭಿನ್ನವಾಗಿ ಮನೆಗೆ ಸ್ವಾಗತಿಸುವ ಮೂಲಕ ಅಯ್ಯೋ ಹೆಣ್ಣು ಮಗು ಎನ್ನುವವರಿಗೆ ಮಾದರಿಯೆನಿಸಿದ್ದಾರೆ.
ಹೌದು, ಅಮೃತಸರದ ಫತೇ ಸಿಂಗ್ ಕಾಲೊನಿಯ ಸಾಗರ್ ಮತ್ತು ಅವರ ಜಾನ್ವಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಜಾನ್ವಿ ಅವರು ಎರಡು ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆಣ್ಣು ಮಗುವಾಗಿರುವ ಖುಷಿಯಲ್ಲಿ ಮನೆ ಮಂದಿಯೆಲ್ಲಾ ಸೇರಿ ವಾದ್ಯಗೋಷ್ಠಿಯೊಂದಿಗೆ ಲಕ್ಷ್ಮಿಯನ್ನು ಮನೆಗೆ ಸ್ವಾಗತಿಸುವ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬರುವ ವೇಳೆ ಹೆಣ್ಣು ಮಗುವನ್ನು ರಥದ ಮೇಲೆ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ, ಊರಿನವರೆಲ್ಲ ಸೇರಿ ಸಂಭ್ರಮದೊಂದಿಗೆ ಮನೆಯೊಳಗೆ ಕರೆದುಕೊಂಡಿದ್ದಾರೆ. ಹುಡುಗಿಯೇ ಮನೆ ಲಕ್ಷ್ಮಿ, ಕುಟುಂಬದ ಹೆಸರು ಬೆಳಗುವವಳು. ಗಂಡು ಮಗು ಹುಟ್ಟಿದಾಗ ಹೇಗೆ ಸಂಭ್ರಮಿಸುತ್ತೇವೆಯೋ ಅದೇ ರೀತಿ ಹೆಣ್ಣು ಮಗು ಹುಟ್ಟಿದಾಗಲೂ ಸಂಭ್ರಮಿಸಬೇಕು ಎನ್ನುತ್ತಾರೆ ಮಗುವಿನ ತಾತ ಅಜ್ಜಿ.
ಇದನ್ನೂ ಓದಿ: ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸುವ ಗ್ರಾಮಗಳಿವು: 'ಆರ್ಥಿಕ ಭದ್ರತೆ' ಒದಗಿಸುವ ಆದರ್ಶ ಹಳ್ಳಿಗಳ ಕಥೆ ಇದು