ಕಾಸರಗೋಡು (ಕೇರಳ): ನೆರೆ ರಾಜ್ಯ ಕೇರಳದಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟದ ಘಟನೆಗಳು ಮರುಕಳಿಸುತ್ತಿವೆ. ನಿನ್ನೆ (ಶುಕ್ರವಾರ) ರಾತ್ರಿ ಕಾಸರಗೋಡು ಜಿಲ್ಲೆಯ ಕುಂಬ್ಳೆ ಪಟ್ಟಣದ ರೈಲು ನಿಲ್ದಾಣದ ಬಳಿ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ಎಸೆದಿರುವ ಘಟನೆ ವರದಿಯಾಗಿದೆ. ಇದರಿಂದ ರೈಲು ಬೋಗಿಯೊಂದರ ಗಾಜಿಗೆ ಹಾನಿಯಾಗಿದೆ.
ಕುಂಬ್ಳೆ ರೈಲ್ವೆ ನಿಲ್ದಾಣವನ್ನು ದಾಟಿದ ನಂತರ ಸೆಪ್ಟೆಂಬರ್ 1ರಂದು ರಾತ್ರಿ 8.30ರ ಸುಮಾರಿಗೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನ ಮೇಲೆ ಈ ಕಲ್ಲಿನ ದಾಳಿ ನಡೆದಿದೆ. ದಾಳಿಕೋರರು ರೈಲನ್ನು ಗುರಿಯಾಗಿಸಿಕೊಂಡು ಎಸ್2 ಕೋಚ್‌ಗೆ ಕಲ್ಲು ತೂರಿದ್ದಾರೆ. ಪರಿಣಮ ಬಾಗಿಲಿನ ಗಾಜು ಒಡೆದಿವೆ. ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಈ ಘಟನೆಯ ವಿಷಯ ತಿಳಿದ ತಕ್ಷಣವೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿ ಮತ್ತು ಕುಂಬ್ಳೆ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ತನಿಖೆ ಆರಂಭಿಸಿದ್ದು, ಕಲ್ಲು ಎಸೆದ ಆರೋಪಿಗಳು ಪತ್ತೆಗೆ ಕ್ರಮ ವಹಿಸಿದ್ದಾರೆ.
ಮುನ್ನೆಚ್ಚರಿಕೆ ನಂತರವೂ ಕಲ್ಲೆಸೆತ: ಉತ್ತರ ಕೇರಳದಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ರೈಲುಗಳಿಗೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ದಾಳಿಗಳನ್ನು ತಡೆಯಲು ಪೊಲೀಸರು ಕಟ್ಟೆಚ್ಚರ ವಹಿಸುತ್ತಿರುವಾಗಲೇ ಮತ್ತೆ ಹೊಸ ಘಟನೆಗಳು ಮರುಕಳಿಸುತ್ತಿವೆ. ಇದರಿಂದ ಆರ್‌ಪಿಎಫ್ ಸಿಬ್ಬಂದಿ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಅಧಿಕಾರಿಗಳು ಮತ್ತು ಪೊಲೀಸರು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ರೈಲುಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸುವ ಕೆಲಸವಾಗಿದೆ. ರೈಲ್ವೆ ಹಳಿ ಮೇಲೂ ಸಿಬ್ಬಂದಿ ನಿಯೋಜನೆಯೊಂದಿಗೆ ಸಿಸಿಟಿವಿ ಕ್ಯಾಮರಾಗಳನ್ನು ಕಣ್ಗಾವಲು ಇರಿಸಲಾಗಿದೆ. ಆದರೂ, ಕಲ್ಲು ತೂರಾಟದ ಘಟನೆಗಳು ವರದಿಯಾಗುತ್ತಿವೆ.
ಈ ಹಿಂದಿನ ಕಲ್ಲು ತೂರಾಟ ಘಟನೆಗಳು: ರಾಜ್ಯದ ಹಲವೆಡೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿ ಹಲವು ರೈಲುಗಳ ಮೇಲೆ ಕಲ್ಲು ತೂರಾಟ ಘಟನೆಗಳು ನಡೆದಿದೆ. ಮಲಪ್ಪುರಂ ಜಿಲ್ಲೆಯ ತಾನೂರ್ ಬಳಿ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ ಆರೋಪಿಯೋರ್ವನನ್ನು ಬಂಧಿಸಲಾಗಿದ್ದು, ಈತ ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅಲ್ಲದೇ, ಕಳೆದ ತಿಂಗಳು ಸರಣಿ ಘಟನೆಗಳು ವರದಿಯಾಗಿದ್ದವು.
ಆಗಸ್ಟ್ 13ರಂದು ಚೆನ್ನೈ ಸೂಪರ್‌ಫಾಸ್ಟ್, ನೇತ್ರಾವತಿ ಎಕ್ಸ್‌ಪ್ರೆಸ್ ಮತ್ತು ಓಖಾ ಎಕ್ಸ್‌ಪ್ರೆಸ್ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿತ್ತು. ಇದರ ನಂತರ ಆಗಸ್ಟ್ 14ರಂದು ಕನ್ನಪುರಂ ಮತ್ತು ಪಾಪಿನಿಸ್ಸೆರಿ ನಡುವೆ ದುರಂತೋ ಎಕ್ಸ್‌ಪ್ರೆಸ್ ಮೇಲೆ ಕಲ್ಲು ಎಸೆಯಲಾಗಿತ್ತು. ಆಗಸ್ಟ್ 15ರಂದು ಕೋಝಿಕ್ಕೋಡ್ ಮತ್ತು ಕಲ್ಲೈ ನಡುವೆ ಯಶವಂತಪುರ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆಗಳಿಗೆ ಸಂಬಂಧಿಸಿದಂತೆ ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಮೂವರು ಆರೋಪಿಗಳನ್ನು ಬಂಧಿಸಿತ್ತು.
ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ.. ತಂದೆ, ಇಬ್ಬರು ಮಕ್ಕಳ ಬಂಧನ