ಅಯೋಧ್ಯಾ (ಉತ್ತರ ಪ್ರದೇಶ): ಭಗವಾನ್ ಶ್ರೀ ರಾಮ ಮತ್ತು ಸೀತಾ ದೇವಿಯ ಜೀವಂತ ಸ್ವರೂಪದ ವಿಗ್ರಹಗಳನ್ನು ಕೆತ್ತಲು ಉದ್ದೇಶಿಸಿರುವ 'ಶಾಲಿಗ್ರಾಮ್' ಕಲ್ಲುಗಳನ್ನು ನೇಪಾಳದಿಂದ ರವಾನೆಯಾಗಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (SRJTKT) ಹೇಳಿದೆ. ರಾಮಮಂದಿರ ನಿರ್ಮಾಣ ಸಮಿತಿಯ ಎರಡು ದಿನಗಳ ಸಭೆಯಲ್ಲಿ ದೇವತೆಗಳ ವಿನ್ಯಾಸ ಮತ್ತು ಇತರ ಸಂಕೀರ್ಣ ವಿವರಗಳ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶ್ರೀರಾಮ ಜನ್ಮಭೂಮಿ ಕಾಂಪ್ಲೆಕ್ಸ್‌ನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೇಪಾಳದ ಗಂಡಕಿ ನದಿಯಲ್ಲಿ ಪತ್ತೆಯಾದ ಅಪರೂಪದ ಬಂಡೆಗಳಿಂದ ಶ್ರೀರಾಮ ಮತ್ತು ಸೀತಾ ಮಾತೆಯ ವಿಗ್ರಹಗಳನ್ನು ಕೆತ್ತಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಈ ವಿಗ್ರಹಗಳನ್ನು ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುವುದು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ‘ಶಾಲಿಗ್ರಾಮ’ ಶಿಲೆಯನ್ನು ರಾಮ ಲಲ್ಲಾನ ನಿಶ್ಚಲ ವಿಗ್ರಹವನ್ನು ಕೆತ್ತಲು ಬಳಸಲಾಗುವುದು. ಮಯಾಗಡಿ ಮತ್ತು ಮುಸ್ತಾಂಗ್ ಜಿಲ್ಲೆಯ ಮೂಲಕ ಹರಿಯುವ ಕಾಳಿ ಗಂಡಕಿ ನದಿಯ ದಡದಲ್ಲಿ ಮಾತ್ರ ಕಂಡುಬರುವ 'ಶಾಲಿಗ್ರಾಮ್' ಕಲ್ಲುಗಳು ನೇಪಾಳಿ ಸಂತರು ಅಯೋಧ್ಯೆಗೆ ನೀಡಿದ ಕೊಡುಗೆಯಾಗಿವೆ ಎಂದು ಅವರು ಹೇಳಿದರು.
ಸಭೆಯಲ್ಲಿ ವಿಗ್ರಹದ ನೋಟ, ವಿಗ್ರಹದ ಎತ್ತರ ಹೇಗಿರಬೇಕು, ಕಣ್ಣುಗಳು ಹೇಗಿರಬೇಕು, ತುಟಿಗಳನ್ನು ಹೇಗೆ ಕೆತ್ತಬೇಕು ಮತ್ತು ಇನ್ನೂ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ರೈ ಹೇಳಿದರು. ವಿಗ್ರಹಗಳ ನಿರ್ಮಾಣಕ್ಕಾಗಿ ಭಾರತದಾದ್ಯಂತ ಇದೇ ರೀತಿಯ ಕಲ್ಲುಗಳನ್ನು ಇಲ್ಲಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಮುಂದಿನ ವರ್ಷ ಮಕರ ಸಂಕ್ರಾಂತಿಯಂದು ರಾಮಮಂದಿರದ ಗರ್ಭಗುಡಿಯಲ್ಲಿ ಹೊಸ ರಾಮಲಲ್ಲಾ ವಿಗ್ರಹ ಸ್ಥಾಪಿಸಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ನಿರ್ಧರಿಸಿದೆ. ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ನೇತೃತ್ವದ ಸಭೆಯಲ್ಲಿ ರೈ, ಅನಿಲ್ ಮಿಶ್ರಾ, ಜಗದ್ಗುರು ವಾಸುದೇವಾನಂದ ಸರಸ್ವತಿ, ರಾಜಾ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಮತ್ತು ಖಜಾಂಚಿ ಗೋವಿಂದ್ ದೇವ್ ಗಿರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ರಾಮಮಂದಿರದ ವಾಸ್ತುಶಿಲ್ಪವನ್ನು ಚಂದ್ರಕಾಂತ್ ಸೋಂಪುರ, ನಿಖಿಲ್ ಸೋಂಪುರ ಮತ್ತು ಆಶಿಶ್ ಸೋಂಪುರ ಇವರನ್ನು ಒಳಗೊಂಡಿರುವ ಸೋಂಪುರ ಕುಟುಂಬದವರು ನಿರ್ವಹಿಸುತ್ತಿದ್ದಾರೆ. ಭಗವಾನ್ ಶ್ರೀರಾಮ ವಿಗ್ರಹವು ಸುಮಾರು 8.5 ಅಡಿ ಎತ್ತರವಿರಲಿದ್ದು, ಸೂರ್ಯನ ಬೆಳಕು ಅದರ ಮೇಲೆ ಬೀಳುತ್ತದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಪಂಚ ನ್ಯಾಯಾಧೀಶರ ಸಂವಿಧಾನ ಪೀಠವು ನವೆಂಬರ್ 9, 2019 ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಇದ್ದ ಭೂಮಿ ರಾಮ ಲಲ್ಲಾಗೆ ಸೇರಿದೆ ಎಂದು ಸರ್ವಾನುಮತದಿಂದ ತೀರ್ಪು ನೀಡಿತ್ತು.
ರಾಮಮಂದಿರದ ಗರ್ಭಗುಡಿಯ ನಿರ್ಮಾಣಕ್ಕೆ 2022ನೇ ವರ್ಷದ ಜೂನ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಡಿಪಾಯ ಹಾಕಿದ್ದರು. ಆಗಸ್ಟ್ 5, 2020 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಇದನ್ನೂ ಓದಿ: ಮುಂದಿನ ಸಂಕ್ರಾಂತಿ ಒಳಗಾಗಿ ರಾಮಮಂದಿರದ ಕಾಮಗಾರಿ ಪೂರ್ಣ: ಪೇಜಾವರ ಶ್ರೀ