ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ತೀನ್ ಮೂರ್ತಿ ಭವನದ ಆವರಣದಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯನ್ನು ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿದೆ. ಪ್ರಧಾನಮಂತ್ರಿಗಳ ಸಂಗ್ರಹಾಲಯ ಉದ್ಘಾಟನೆಗೊಂಡ ಸುಮಾರು ಒಂದು ವರ್ಷದ ನಂತರ ಈ ಬೆಳವಣಿಗೆ ನಡೆದಿದೆ.
ತೀನ್ ಮೂರ್ತಿ ಭವನವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಧಿಕೃತ ನಿವಾಸವಾಗಿತ್ತು. ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಎನ್‌ಎಂಎಂಎಲ್) ವಿಶೇಷ ಸಭೆಯಲ್ಲಿ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಶುಕ್ರವಾರ ತಿಳಿಸಿದೆ.
ಸೊಸೈಟಿಯ ಉಪಾಧ್ಯಕ್ಷರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಸಿಂಗ್, ಹೆಸರಿನ ಬದಲಾವಣೆಯ ಪ್ರಸ್ತಾಪವನ್ನು ಸ್ವಾಗತಿಸಿದ್ದಾರೆ. ಏಕೆಂದರೆ, ಈ ಸೊಸೈಟಿಯು ತನ್ನ ಹೊಸ ರೂಪದಲ್ಲಿ ಜವಾಹರಲಾಲ್ ನೆಹರು ಅವರಿಂದ ನರೇಂದ್ರ ಮೋದಿಯವರವರೆಗಿನ ಎಲ್ಲ ಪ್ರಧಾನ ಮಂತ್ರಿಗಳ ಕೊಡುಗೆಗಳನ್ನು ಮತ್ತು ಅವರು ತಮ್ಮ ಕಾಲಘಟ್ಟದಲ್ಲಿ ಎದುರಿಸಿದ ವಿವಿಧ ಸವಾಲುಗಳಿಗೆ ಯಾವ ರೀತಿ ಪ್ರತಿಕ್ರಿಯಿಸಿದ್ದರು ಎಂಬುದನ್ನು ಪ್ರದರ್ಶಿಸುತ್ತದೆ ಎಂಬುದಾಗಿ ಸಚಿವರು ಹೇಳಿದರು.
ಮುಂದುವರೆದು, ಪ್ರಧಾನ ಮಂತ್ರಿಗಳನ್ನು ಒಂದು ಸಂಸ್ಥೆ ಎಂದು ವಿಶ್ಲೇಷಿಸಿದ ಸಚಿವ ರಾಜನಾಥ್, ವಿವಿಧ ಪ್ರಧಾನ ಮಂತ್ರಿಗಳ ಪ್ರಯಾಣವನ್ನು ಮಳೆಬಿಲ್ಲಿನ ವಿವಿಧ ಬಣ್ಣಗಳಿಗೆ ಹೋಲಿಸಿದರು. "ಕಾಮನಬಿಲ್ಲಿನ ಎಲ್ಲ ಬಣ್ಣಗಳನ್ನು ಸುಂದರವಾಗಿಸಲು ಪ್ರಮಾಣಾನುಗುಣವಾಗಿ ಪ್ರತಿನಿಧಿಸಬೇಕು. ಹೀಗಾಗಿ ಈ ನಿರ್ಣಯವು ನಮ್ಮ ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳಿಗೆ ಪ್ರಜಾಪ್ರಭುತ್ವ ನೆಲೆಗಟ್ಟಿನಲ್ಲಿ ಹೊಸ ಹೆಸರು, ಗೌರವವನ್ನು ನೀಡಿದೆ ಎಂಬುವುದಾಗಿ ಅಭಿಪ್ರಾಯಪಟ್ಟರು ಎಂದು ಸಂಸ್ಕೃತಿ ಸಚಿವಾಲಯ ಮಾಹಿತಿ ನೀಡಿದೆ.
ಕಾಂಗ್ರೆಸ್ ಟೀಕೆ: ಹೆಸರು ಬದಲಾವಣೆ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ಇದೊಂದು ಕ್ಷುಲ್ಲಕ ಮತ್ತು ಪ್ರತೀಕಾರದ ಕ್ರಮ. 59 ವರ್ಷಗಳಿಂದ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವು ಜಾಗತಿಕ ಬೌದ್ಧಿಕ ಹೆಗ್ಗುರುತು, ಪುಸ್ತಕಗಳು ಮತ್ತು ಪತ್ರಾಗಾರ ನಿಧಿಯ ಮನೆಯಾಗಿದೆ. ಇನ್ಮುಂದೆ ಇದನ್ನು ಪ್ರಧಾನಿಮಂತ್ರಿ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಕರೆಯಲಾಗುತ್ತದೆ. ಭಾರತೀಯ ರಾಷ್ಟ್ರದ ವಾಸ್ತುಶಿಲ್ಪಿ ಹೆಸರು ಮತ್ತು ಪರಂಪರೆಯನ್ನು ವಿರೂಪಗೊಳಿಸಲು, ಅವಹೇಳನ ಮಾಡಲು ಮತ್ತು ನಾಶಮಾಡಲು ಮೋದಿ ಅವರು ಏನು ಮಾಡುವುದಿಲ್ಲ?. ತನ್ನ ಅಭದ್ರತೆಯಿಂದ ತುಂಬಿರುವ ಸಣ್ಣ, ಸಣ್ಣ ವ್ಯಕ್ತಿ ಸ್ವಯಂಘೋಷಿತ ವಿಶ್ವಗುರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಹ ಟ್ವೀಟ್ ಮಾಡಿ, ಸ್ವಾತಂತ್ರ್ಯೋತ್ತರ ಭಾರತದ ವೈಭವದ ಶಿಲ್ಪಿ ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಬದಲಾಯಿಸುವ ಮೂಲಕ ಅವರ ಪರಂಪರೆಯನ್ನು ಅಳಿಸಿಹಾಕುವುದು ಒಂದು ಸಣ್ಣ ಕಾರ್ಯವಾಗಿದೆ. ಇದು ಪ್ರಸ್ತುತ ಆಡಳಿತದ ಘನತೆಯನ್ನು ಇನ್ನಷ್ಟು ಕುಗ್ಗಿಸುತ್ತದೆ. ಭಾರತದ ಪ್ರತಿಯೊಂದು ಯಶಸ್ಸನ್ನು ನೆಹರು ಜಿಯವರ ದೃಷ್ಟಿಕೋನದ ತಳಹದಿಯ ಮೇಲೆ ಸಾಧಿಸಲಾಗುತ್ತದೆ. ಅದು ಇಡೀ ಭಾರತಕ್ಕೆ ತಿಳಿದಿದೆ. ಮ್ಯೂಸಿಯಂನಿಂದ ಅವರ ಹೆಸರನ್ನು ತೆಗೆದುಹಾಕುವುದರಿಂದ ಪ್ರತಿ ಭಾರತೀಯರ ಹೃದಯದಲ್ಲಿ ನೆಹರು ಪಡೆದಿರುವ ಗೌರವಾನ್ವಿತ ಸ್ಥಾನಮಾನ ಬದಲಾಗಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸ್ವಾತಂತ್ರ್ಯ ಹೋರಾಟ ಮತ್ತು ಆಧುನಿಕ ಭಾರತದ ನಿರ್ಮಾಣಕ್ಕೆ ಜವಾಹರ್ ಲಾಲ್ ನೆಹರು ಅವರ ಕೊಡುಗೆಯನ್ನು ಅಳಿಸಲು ಬಯಸುವವರು ಒಮ್ಮೆ ನೆಹರು ಅವರ ಆಳವನ್ನು ಅಳೆಯಲು ಡಿಸ್ಕವರಿ ಆಫ್ ಇಂಡಿಯಾ ಮತ್ತು ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿಯನ್ನು ಓದಬೇಕೆಂದು ನಾನು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ನೀವು (ಜವಾಹರಲಾಲ್ ನೆಹರು) ಹೆಸರನ್ನು ಬೋರ್ಡ್‌ಗಳಿಂದ ತೆಗೆದುಹಾಕಬಹುದು. ಆದರೆ ಈ ದೇಶದ ಜನರು ಅವರ ಬಗ್ಗೆ ಹೊಂದಿರುವ ಗೌರವವನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Yoga: ಮೊದಲ ಬಾರಿ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ!