ಪಾಟ್ನಾ(ಬಿಹಾರ): ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಬಿಹಾರದ 20 ಪಾರಂಪರಿಕ ತಾಣಗಳು ತುಕ್ಕು ಹಿಡಿಯುತ್ತಿವೆ. ಪಾರಂಪರಿಕ ತಾಣಗಳ ಸುತ್ತಲಿನ ಜಾಗದ ಅತಿಕ್ರಮಣ ಮತ್ತು ಅನಧಿಕೃತ ನಿರ್ಮಾಣವನ್ನು ದೂರು ನೀಡಿದರೂ ತೆರವುಗೊಳಿಸಲಾಗಿಲ್ಲ. ಹೀಗಾಗಿ ಅವುಗಳನ್ನು "ಸಂಪೂರ್ಣ ರಕ್ಷಣೆ" ವ್ಯಾಪ್ತಿಗೆ ತರಲಾಗಿಲ್ಲ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹೇಳಿದೆ.
ಭಾರತದ ಮೊದಲ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಪೂರ್ವಜರ ಮನೆ ಸೇರಿದಂತೆ ಇಲ್ಲಿರುವ ಕನಿಷ್ಠ 20 ಪಾರಂಪರಿಕ ತಾಣಗಳನ್ನು ನಿರ್ವಹಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಈ ಬಗ್ಗೆ ಹಲವು ಬಾರಿ ಸೂಚಿಸಿದಾಗ್ಯೂ ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಬೇಸರಿಸಿದ್ದಾರೆ.
ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತಲಿನ ನಿರ್ಬಂಧಿತ ಪ್ರದೇಶಗಳಲ್ಲಿ ಅಕ್ರಮ ನಿರ್ಮಾಣಗಳು ತಲೆ ಎತ್ತಿವೆ. ಇವುಗಳನ್ನು ನಿರ್ಬಂಧಿಸಲು ಕೋರಿ ದೂರು ದಾಖಲಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ. ಅತಿಕ್ರಮಣ ಮತ್ತು ಅನಧಿಕೃತ ನಿರ್ಮಾಣ ತೆರವು ಮಾಡುವಲ್ಲಿ ಜಿಲ್ಲಾಡಳಿತದ ನಿರಾಸಕ್ತಿ ಅವುಗಳನ್ನು ಸಂಪೂರ್ಣ ರಕ್ಷಣೆ ವ್ಯಾಪ್ತಿಗೆ ತರಲು ಅಡ್ಡಿಯಾಗಿದೆ ಎಂದು ಇಲಾಖಾಧಿಕಾರಿ ತಿಳಿಸಿದರು.
ಸಂರಕ್ಷಣೆಗೆ ಸ್ಥಳೀಯರಿಂದಲೇ ವಿರೋಧ: ಭಾರತದ ಪ್ರಪ್ರಥಮ ರಾಷ್ಟ್ರಪತಿಗಳಾದ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರ ಪೂರ್ವಜರ ಹಳೆಯ ಮನೆಯನ್ನು ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸ್ಥಳೀಯರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಅಡ್ಡಿಪಡಿಸಿದ ಕಾರಣ ಯೋಜನೆಯನ್ನು ನಿಲ್ಲಿಸಲಾಗಿದೆ.
ಸಂರಕ್ಷಿತ ಸ್ಮಾರಕಗಳ ರಕ್ಷಣೆಗೆ ಜಿಲ್ಲಾಡಳಿತಗಳು ಪುರಾತತ್ವ ಇಲಾಖೆಗೆ ಸಹಕಾರ ನೀಡಬೇಕು. ಆ ಸ್ಥಳಗಳ ಸುತ್ತಲೂ ಬೇಲಿ ಹಾಕಲು ಪೊಲೀಸ್ ಬಂದೋಬಸ್ತ್ ನೀಡಬೇಕು. ಈ ಬಗ್ಗೆ ಸ್ಥಳೀಯರ ಮನವೊಲಿಸಬೇಕು ಎಂದು ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ ಬಗ್ಗೆ ತಿಳಿಸಿದರು.
ಅಶೋಕನ ಶಿಲಾಶಾಸನಕ್ಕೂ ಕುತ್ತು: ಇಲ್ಲಿನ ಸಸಾರಂ ಪಟ್ಟಣದ ದಕ್ಷಿಣಕ್ಕೆ 3 ಕಿಮೀ ದೂರದ ಚಂದನ್ ಹಿಲ್‌ನಲ್ಲಿರುವ ಮೌರ್ಯ ಚಕ್ರವರ್ತಿ ಅಶೋಕನ ಶಿಲಾ ಶಾಸನಕ್ಕೂ ಕುತ್ತು ಬಂದಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅತಿಕ್ರಮಣ ಹೆಚ್ಚಾಗಿದೆ. ಪುರಾತನ ಇತಿಹಾಸ ಸಾರುವ ಶಾಸನದ ಸಂರಕ್ಷಣೆಗೆ ಸಮಸ್ಯೆ ಎದುರಾಗಿದೆ ಎಂದು ಪುರಾತತ್ವಶಾಸ್ತ್ರಜ್ಞರು ಹೇಳಿದರು.
ಇದಲ್ಲದೇ, ಬೌದ್ಧ ಸ್ತೂಪ, ರಾಜಾ ಬಲಿ ಕಾ ಗಡ್, ಕೋಟೆಯ ಅವಶೇಷಗಳು, ಮೂರು ಶಿಲಾ ಶಾಸನಗಳು, ತಾರಾ ಚಂಡಿ ದೇವಸ್ಥಾನ ಸೇರಿದಂತೆ ಹಲವು ಸ್ಮಾರಕಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಳಿವಿನಂಚಿನಲ್ಲಿವೆ ಎಂಬ ಗಂಭೀರ ಆರೋಪವಿದೆ.
ಇದನ್ನೂ ಓದಿ: ಕೊಡಗುದಲ್ಲಿ 800 ವರ್ಷದ ಪುರಾತನ ಶಿವ ದೇವಾಲಯ ಪತ್ತೆ.. ಜೀರ್ಣೋದ್ಧಾರಕ್ಕೆ ಗ್ರಾಮಸ್ಥರ ನಿರ್ಧಾರ