ಹಮೀರ್‌ಪುರ(ಹಿಮಾಚಲ ಪ್ರದೇಶ): ಎಜುಕೇಷನ್ ಹಬ್ ಹಮೀರ್‌ಪುರ ಜಿಲ್ಲೆಯ ಇಬ್ಬರು ಹೆಣ್ಣು ಮಕ್ಕಳು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ನೀಟ್ ಪರೀಕ್ಷೆಯಲ್ಲಿ ಅವಳಿ ಸಹೋದರಿಯರು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಗೌರವ ಹೆಚ್ಚಿಸಿಕೊಂಡ ಅವಳಿ ಸಹೋದರಿಯರು.. ನದೌನ್ ಉಪವಿಭಾಗದ ಗ್ರಾಮ ಪಂಚಾಯಿತಿಯ ಪುದಿಯಾಲ್ ನಿವಾಸಿ ರಿಯಾ ಮತ್ತು ಸಿಯಾ ನೀಟ್ ಪರೀಕ್ಷೆಯ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ. ರಿಯಾ ಮತ್ತು ಸಿಯಾ ಅವರ ತಂದೆ ಟ್ರಕ್ ಡ್ರೈವರ್. ಸಿಯಾ 720ಕ್ಕೆ 645 ಗಳಿಸಿದ್ರೆ, ಆಕೆಯ ಸಹೋದರಿ ರಿಯಾ 617 ಅಂಕ ಪಡೆದಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿದ ತಂದೆ.. ರಿಯಾ ಮತ್ತು ಸಿಯಾ ತಂದೆ ಕುಶಾಲ್ ಕುಮಾರ್ ನುರಿತ ಚಾಲಕರಾಗಿದ್ದಾರೆ. ಟ್ರಕ್ ಓಡಿಸಿ ಜೀವನ ಸಾಗಿಸುತ್ತಿದ್ದರೂ ಸಹ ತಮ್ಮ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಯಾವತ್ತೂ ಕಡಿಮೆ ಮಾಡಲಿಲ್ಲ. ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಶ್ರಮವನ್ನು ಸಾರ್ಥಕಗೊಳಿಸಿದ್ದಾರೆ. ಕೇಂದ್ರೀಯ ವಿದ್ಯಾಲಯ ಹಮೀರ್‌ಪುರದಲ್ಲಿ 12ನೇ ತರಗತಿಯಲ್ಲಿ ತೇರ್ಗಡೆಯಾದ ಇಬ್ಬರು ಸಹೋದರಿಯರು ಮೊದಲಿನಿಂದಲೂ ಓದು ಮತ್ತು ಬರಹದಲ್ಲಿ ಚುರುಕಾಗಿದ್ದರು. ಸಹೋದರಿಯರಿಬ್ಬರೂ ಶಾಲೆಯಲ್ಲಿ ವೈದ್ಯರಾಗುವ ಕನಸು ಕಂಡಿದ್ದರು. ತಂದೆ ಕುಶಾಲ್ ಕುಮಾರ್ ಕೂಡ ಹೆಣ್ಣು ಮಕ್ಕಳಿಬ್ಬರಿಗೂ ಸದಾ ಓದುವಂತೆ ಪ್ರೇರೇಪಿಸಿ, ಅವರ ಕನಸು ನನಸಾಗಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ರಿಯಾ ಮತ್ತು ಸಿಯಾ ಅವರ ಪರಿಶ್ರಮದ ಫಲವಾಗಿ ಸಹೋದರಿಯರಿಬ್ಬರೂ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಯಶಸ್ಸಿನ ಸಾಧನೆಯನ್ನು ಇಬ್ಬರೂ ಸಹೋದರಿಯರು ತಮ್ಮ ಶಿಕ್ಷಕರು ಮತ್ತು ಪೋಷಕರಿಗೆ ಅರ್ಪಿಸಿದ್ದಾರೆ.
ಗ್ರಾಮಕ್ಕೆ ಕೀರ್ತಿ ತಂದ ಸಹೋದರಿಯರು.. ಈ ಯಶಸ್ಸಿನ ಶ್ರೇಯಸ್ಸು ಹೆಣ್ಣು ಮಕ್ಕಳ ಪರಿಶ್ರಮಕ್ಕೆ ಸಲ್ಲುತ್ತದೆ ಎಂದು ತಂದೆ ಕುಶಾಲ್ ಕುಮಾರ್ ಅಂತಸ ಹಂಚಿಕೊಂಡರು. ಅವಳಿ ಸಹೋದರಿಯರಿಬ್ಬರೂ ಗ್ರಾಮಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇಂದು ಈ ಇಬ್ಬರು ಹೆಣ್ಣುಮಕ್ಕಳು ದೇಶಾದ್ಯಂತ ಸುದ್ದಿಯಾಗಿದ್ದಾರೆ. ಹಳ್ಳಿಯ ಹೆಸರನ್ನು ಉತ್ತಂಗಕ್ಕೆ ಕೊಂಡೊಯ್ದಿದ್ದಾರೆ. ಹೆಣ್ಣು ಮಕ್ಕಳ ಯಶಸ್ಸಿನ ನಂತರ ಗ್ರಾಮದಲ್ಲಿ ಸಂತಸದ ವಾತಾವರಣವಿದೆ ಎಂದು ಪಂಚಾಯತ್ ಉಪ ಪ್ರಧಾನ ಸಂಜೀವ್ ಕುಮಾರ್ ಸಂತಸ ವ್ಯಕ್ತಪಡಿಸಿದರು.
ನೀಟ್ ಪರೀಕ್ಷೆಯಲ್ಲಿ ಶಿಮ್ಲಾದ ಆದಿತ್ಯ ರಾಜ್ ಟಾಪರ್.. ಶಿಮ್ಲಾದ ಆದಿತ್ಯ ರಾಜ್ ಶರ್ಮಾ ಹಿಮಾಚಲದ ಟಾಪರ್ ಆಗಿದ್ದಾರೆ. ಆದಿತ್ಯ 720 ಅಂಕಗಳಿಗೆ 687 ಅಂಕಗಳನ್ನು ಪಡೆದಿದ್ದಾರೆ. ಆದಿತ್ಯ ನ್ಯೂರೋ ಸರ್ಜನ್ ಆಗಲು ಬಯಿಸಿದ್ದಾರೆ.
ನೀಟ್ ಪರೀಕ್ಷೆಯು 17 ಜುಲೈ 2022 ರಂದು ನಡೆಯಿತು. ದೇಶದಾದ್ಯಂತ 3,750 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗೆ 18.72 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿದ್ದರು. ಆದರೆ 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಹಿಮಾಚಲದಲ್ಲಿ 9,773 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಓದಿ: ನೀಟ್ ಪರೀಕ್ಷೆ ಫಲಿತಾಂಶ ಪ್ರಕಟ: ರಾಜ್ಯದ ಅಭ್ಯರ್ಥಿಗಳ ಉತ್ತಮ ಸಾಧನೆ