ನವದೆಹಲಿ: ದೇಶದ ಕೆಲವು ರಾಜ್ಯಗಳಲ್ಲಿ ಮಹಾಮಾರಿ ಕೊರೊನಾ ವೈರಸ್‌ನ ಎರಡನೇ ಅಲೆ ಜೋರಾಗಿ ಬೀಸಲು ಆರಂಭವಾಗಿದೆ. ಇದೇ ಇದೇ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಹತ್ವದ ಚರ್ಚೆ ನಡೆಸಿದರು. ಈ ವೇಳೆ ಅವರು ಮಹತ್ವದ ಸೂಚನೆಗಳನ್ನು ನೀಡಿದರು.
ದೇಶದಲ್ಲಿ ಕೊರೊನಾ ಎರಡನೇ ಅಲೆ ವಿಸ್ತರಣೆಗೆ ಕಡಿವಾಣ ಹಾಕಬೇಕು. ಅದಕ್ಕಾಗಿ ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಕೋವಿಡ್ ಪ್ರಕರಣದ ಹೆಚ್ಚಳದ ಬಗ್ಗೆ ಜನರಲ್ಲಿ ಭಯ ಸೃಷ್ಟಿ ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಪ್ರಧಾನಿ ಸೂಚನೆಗಳನ್ನು ನೀಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇಂತಹ ಪ್ರದೇಶಗಳನ್ನು ಸುರಕ್ಷಿತವಾಗಿಡಲು ಗಮನ ಹರಿಸಬೇಕು. ನಗರ ಪ್ರದೇಶಗಳಲ್ಲಿ ಕೋವಿಡ್ ಟೆಸ್ಟ್, ಲಸಿಕೆ ವಿತರಣೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರ ಜತೆಗೆ ಪ್ರತಿದಿನ 30 ಲಕ್ಷ ಜನರಿಗೆ ಲಸಿಕೆ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ತಿಳಿಸಿದರು.
ಟೆಸ್ಟ್, ಟ್ರೇಸ್, ಟ್ರ್ಯಾಕ್ ಮಂತ್ರದಿಂದ ಕೊರೊನಾ ಸೋಂಕು ನಿಯಂತ್ರಣ ಮಾಡುವ ಅವಶ್ಯಕತೆ ಇದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳು ಜತೆಗೆ ಹೆಚ್ಚಿನ ಜನರು ಒಟ್ಟಾಗಿ ಒಂದೆಡೆ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಕಂಟೋನ್ಮೆಂಟ್ ಪ್ರದೇಶಗಳಲ್ಲಿ ತ್ವರಿತಗತಿಯ ಚಿಕಿತ್ಸೆ ನೀಡುವುದರ ಜತೆಗೆ ಆರ್ಟಿ-ಪಿಸಿಆರ್ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಬೇಕು. ವಿದೇಶಿ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ವಹಿಸುವಂತೆಯೂ ಅವರು ಹೇಳಿದರು.
ದೇಶದ ಜನರು ಕೊರೊನಾ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಉತ್ತೇಜನ ಮಾಡಲು ಕ್ರಮ ಕೈಗೊಳ್ಳಿ. ಈ ನಿಟ್ಟಿನಲ್ಲಿ ಲಸಿಕಾ ಕೇಂದ್ರಗಳನ್ನೂ ಹೆಚ್ಚಿಸಿ. ಯಾವುದೇ ಕಾರಣಕ್ಕೂ ಕೊರೊನಾ ಲಸಿಕೆ ವೇಸ್ಟ್ ಆಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಪ್ರಮುಖಾಂಶಗಳು ಇಂತಿವೆ..
- ಆರ್ಟಿಪಿಸಿಆರ್ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಕ್ರಮ
- ದೇಶದಲ್ಲಿ ಕೊರೊನಾ ಎರಡನೇ ಅಲೆ ವಿಸ್ತರಣೆಗೆ ಕಡಿವಾಣ
- ಲಸಿಕೆಗಳು ವ್ಯರ್ಥವಾಗದಂತೆ ಕ್ರಮ ಕೈಗೊಳ್ಳುವುದು
- ಸಾರ್ವಜನಿಕರಲ್ಲಿ ಭೀತಿಗೊಳಗಾಗದಂತೆ ನೋಡಿಕೊಳ್ಳುವುದು
- ಸಣ್ಣ ನಗರ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿನ ಕೋವಿಡ್ ಟೆಸ್ಟ್
- ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಹರಡದಂತೆ ತಡೆಗಟ್ಟುವುದು