ಪಾಟ್ನಾ(ಬಿಹಾರ) : ಐಎನ್ಡಿಐಎ ಕೂಟದ ಭಾಗವಾಗಿರುವ ಸಿಎಂ ನಿತೀಶ್ಕುಮಾರ್ ರಾಜ್ಯವಾದ ಬಿಹಾರದಲ್ಲಿ ಭರ್ಜರಿ ರೋಡ್ ಶೋ ನಡೆಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಎಲ್ಲಾ 40 ಲೋಕಸಭಾ ಸ್ಥಾನಗಳನ್ನು ಎನ್‌ಡಿಎ ಗೆದ್ದು ಚರಿತ್ರೆ ಬರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯ ಝಂಜರ್‌ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವರು, ಬಿಹಾರದಲ್ಲಿ 2019 ರ ಚುನಾವಣೆಯಲ್ಲಿ ಎನ್‌ಡಿಎ 39 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಇರುವ 40 ಸ್ಥಾನಗಳನ್ನೂ ವಶಪಡಿಸಿಕೊಳ್ಳಲಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂದು ಹೇಳಿದರು.
ಬಿಹಾರದಲ್ಲಿ ಹೆದಗೆಟ್ಟ ಕಾನೂನು ಸುವ್ಯವಸ್ಥೆ: ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪ್ರತಿದಿನ ಹದಗೆಡುತ್ತಿದೆ. ಅವಕಾಶವಾದಿ ಮೈತ್ರಿಯಿಂದಾಗಿ ರಾಜ್ಯ ಸಂಕಷ್ಟಕ್ಕೆ ಸಿಲುಕಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಏಕಪಕ್ಷವಾಗಿ ಬೆಂಬಲಿಸಲಿದ್ದಾರೆ ಎಂದು ಅವರು ಗುಡುಗಿದರು.
ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗದಿದ್ದರೆ, ಇಡೀ ಸೀಮಾಂಚಲ್ ಪ್ರದೇಶವು ಒಳನುಸುಳುಕೋರರಿಂದ ತುಂಬಿರುತ್ತದೆ. ನಿತೀಶ್-ಲಾಲು ಮೈತ್ರಿ ತೈಲ ಮತ್ತು ನೀರಿನ ಮಿಶ್ರಣದಂತಿದೆ. ಅವರು ಹೆಚ್ಚು ಕಾಲ ಹಾಗೇ ಇರಲು ಸಾಧ್ಯವಿಲ್ಲ. ಮೈತ್ರಿಯು ರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿದೆ. ಇಂತಹ ಕೂಟವನ್ನು ಜನರು ವಿರೋಧಿಸಲಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಲು ಬಯಸುವುದಿಲ್ಲ. ಲಾಲು ಅವರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡುವ ಆಸೆ ಹೊಂದಿದ್ದಾರೆ. ನಿತೀಶ್ ಕುಮಾರ್ ಅವರು ಪ್ರಧಾನಿಯಾಗಲು ಬಯಸಿದ್ದಾರೆ. ಆದರೆ, ಇವರಿಬ್ಬರ ಆಸೆ ಎಂದಿಗೂ ಈಡೇರುವುದಿಲ್ಲ. 2024 ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮಿತ್ ಶಾಗೆ ನಿತೀಶ್ ತಿರುಗೇಟು: ರಾಜ್ಯದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಎಂಬುದರ ಅಮಿತ್ ಶಾಗೆ ಗೊತ್ತಿಲ್ಲ. ಎಷ್ಟು ಕೆಲಸ ಮಾಡಲಾಗಿದೆ ಎಂದು ಅವರು ತಿಳಿದಿಲ್ಲ. ಬಿಹಾರ ಅಥವಾ ದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸಿಎಂ ನಿತೀಶ್ ಕುಮಾರ್ ಅವರು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಎನ್‌ಡಿಎ ವಿರುದ್ಧ ಇಂಡಿಯಾ ಕೂಟವನ್ನು ಒಗ್ಗೂಡಿಸುತ್ತಿದ್ದೇವೆ. ಇದರ ಪ್ರಗತಿ ಕಂಡು ಅವರ ಭಯಗೊಂಡಿದ್ದಾರೆ. ಹೀಗಾಗಿ ಅವರು ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದರು. ಪತ್ರಕರ್ತರ ಗುಂಪನ್ನು ಇಂಡಿಯಾ ಅಲಯನ್ಸ್ ಬಹಿಷ್ಕರಿಸಿದೆ ಎಂಬ ಪ್ರಶ್ನೆಗೆ, ಈ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಪತ್ರಕರ್ತರ ಸ್ವಾತಂತ್ರ್ಯದ ಪರವಾಗಿದ್ದೇವೆ. ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಾಗ ಪತ್ರಕರ್ತರು ಏನು ಸರಿಯೋ ಅದನ್ನು ಬರೆಯುತ್ತಾರೆ. ಪತ್ರಕರ್ತರ ಮೇಲೆ ನಿಯಂತ್ರಣ ಸಲ್ಲದು. ನಾವು ಯಾರ ವಿರುದ್ಧವೂ ಅಲ್ಲ ಎಂದರು. (ಪಿಟಿಐ)
ಇದನ್ನೂ ಓದಿ: ಐಎನ್ಡಿಐಎ ಕೂಟದ ಭೋಪಾಲ್ ರ್ಯಾಲಿ ದಿಢೀರ್ ರದ್ದು; ಸಾರ್ವಜನಿಕ ಸಭೆಗೆ ಕಾಂಗ್ರೆಸ್, ಆಪ್ನಿಂದ ಹಿಂದೇಟು