ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ವಿಜಯ ಮಾಲೆ ಹಾಕಿಸಿಕೊಂಡಿದೆ. ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್‌ಡಿಎ ಕೂಡ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುವಿನ ಸ್ಥಾನದ ಕುಸಿತದ ನಡುವೆಯೂ ಬಿಜೆಪಿಗೆ ಮತದಾರರು ತೋರಿದ ಒಲವಿನಿಂದ ಈಗ ನಿತೀಶ್ ಕುಮಾರ್ ಸಿಎಂ ಆಗಲಿದ್ದಾರೆ. 110 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 74 ಸ್ಥಾನಗಳನ್ನು ಗೆದ್ದರೆ, 115 ಸ್ಥಾನಗಳಲ್ಲಿ ಜೆಡಿಯು ಕೇವಲ 42ಅನ್ನು ಗೆದ್ದಿದೆ. ಇನ್ನು ಎಚ್‌ಎಎಂ ಮತ್ತು ವಿಐಪಿ ತಲಾ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಎನ್‌ಡಿಎ ಒಟ್ಟಾರೆ 125 ಸ್ಥಾನಗಳನ್ನು ಗೆದ್ದುಕೊಂಡಿದೆ.
ವಿರೋಧಿ ಗ್ರ್ಯಾಂಡ್ ಅಲೈಯನ್ಸ್ನಲ್ಲಿ ಮ್ಯಾಜಿಕ್ ಸಂಖ್ಯೆಗಿಂತ ಕಡಿಮೆ ಸಂಖ್ಯೆ ಬಂದಿದೆ. ಎಲ್ಲಾ ಐದು ಪಕ್ಷಗಳು ಗೆದ್ದ ಒಟ್ಟು ಸ್ಥಾನಗಳ ಸಂಖ್ಯೆ 110 ಆಗಿದೆ. ಆರ್ಜೆಡಿ 75 ಸ್ಥಾನಗಳನ್ನು ಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶೇಕಡಾ 23.03 ರಷ್ಟಿರುವ ಈ ಪಕ್ಷದ ಮತ ಪಾಲು ಚುನಾವಣೆಯಲ್ಲಿ ಇತರೆ ಪಕ್ಷಕ್ಕೆ ಹೋಲಿಸಿಕೊಂಡರೆ ಹೆಚ್ಚು ಮತಗಳನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಸ್ಪರ್ಧಿಸಿದ 70 ಸ್ಥಾನಗಳ ಪೈಕಿ 19ರಲ್ಲಿ ಮಾತ್ರ ಗೆದ್ದಿದೆ. ಎಡ ಪಕ್ಷಗಳಾದ ಸಿಪಿಐ (ಎಂಎಲ್), ಸಿಪಿಐ ಮತ್ತು ಸಿಪಿಐ (ಎಂ) ತಾವು ಸ್ಪರ್ಧಿಸಿದ 29 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆದ್ದಿವೆ. ಪ್ರಮುಖ ವಿಷಯ ಎಂದರೆ ಸಿಪಿಐ (ಎಂಎಲ್) ನ ಸಾಧನೆ ಈ ಬಾರಿ ಹೆಚ್ಚಾಗಿದೆ. ಕಾರಣ, ಅದು ಸ್ಪರ್ಧಿಸಿದ್ದ 19 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದಂತೆ ಸಿಪಿಐ ಮತ್ತು ಸಿಪಿಐ (ಎಂ) ತಲಾ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.
ಅಸಾದುದ್ದೀನ್ ಒವೈಸಿ ಅವರ ಎಂಐಎಂ ಐದು ಸ್ಥಾನಗಳನ್ನು ಗಳಿಸಿದರೆ, ಮಾಯಾವತಿ ಅವರ ಬಿಎಸ್ಪಿ ಒಂದು ಸ್ಥಾನವನ್ನು ಪಡೆದಿದೆ. ಜೆಡಿಯು ವಿರುದ್ಧ ವಾಗ್ದಾಳಿ ನಡೆಸುತ್ತ 150 ಸ್ಥಾನಗಳಲ್ಲಿ ಅಖಾಡಕ್ಕಿಳಿದಿದ್ದ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷವು ಕೇವಲ ಒಂದು ಸ್ಥಾನವನ್ನು ಗೆದ್ದಿದೆ.