ನವದೆಹಲಿ: 2022ರಲ್ಲಿ ದೇಶದಲ್ಲಿ ಅಪರಾಧ ಚಟುವಟಿಕೆಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಬಹಿರಂಗ ಪಡಿಸಿದೆ. ಈ ವರದಿಯ ಮಾಹಿತಿ ಅನುಸಾರ ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಸಾಕಷ್ಟು ಏರಿಕೆ ಕಂಡಿವೆ. ಇಲ್ಲಿ 14,247 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ಅಪರಾಧ ಪ್ರಮಾಣ ದರ 144.4 ಆಗಿದೆ. ಇದು ರಾಷ್ಟ್ರೀಯ ಸರಾಸರಿ 66.4 ಅನ್ನು ಮೀರಿಸಿದೆ.
ಕಳೆದ ವರ್ಷ ಅಂದರೆ 2021ಕ್ಕೆ ಹೋಲಿಕೆ ಮಾಡಿದಾಗ ಮಹಿಳೆಯರ ವಿರುದ್ಧ ದಾಖಲಾಗಿರುವ ಅಪರಾಧಗಳು ಆತಂಕಕಾರಿ ವಿಷಯವಾಗಿದೆ. 2021ರಲ್ಲಿ 10,093 ಪ್ರಕರಣಗಳು ದಾಖಲಾದರೆ, 2022ರಲ್ಲಿ ದೆಹಲಿಯಲ್ಲಿ 14,277 ಎಫ್ಐಆರ್ ದಾಖಲಾಗಿವೆ.
ರಾಷ್ಟ್ರ ರಾಜಧಾನಿಯಲ್ಲಿ ಅಪರಾಧಗಳ ಪ್ರಕರಣಗಳು ಹೆಚ್ಚಾಗಿರುವುದನ್ನು ಎನ್ಸಿಆರ್ಬಿ ದತ್ತಾಂಶ ತಿಳಿಸಿದೆ. ದೆಹಲಿಯಲ್ಲಿ ಸೈಬರ್ಕ್ರೈಂ ಪ್ರಕರಣಗಳಲ್ಲೂ ಕೂಡ ಏರಿಕೆ ಕಂಡಿದೆ. 2021ರಲ್ಲಿ ಸೈಬರ್ ಅಪರಾಧ ಸಂಬಂಧ 345 ಪ್ರಕರಣ ದಾಖಲಾದರೆ, 2022ರಲ್ಲಿ 685 ಪ್ರಕರಣ ದಾಖಲಾಗಿದೆ. ಈ ಮೂಲಕ ಡಿಜಿಟಲ್ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂಬುದನ್ನು ಬಹಿರಂಗ ಪಡಿಸಿದೆ.
ಅಷ್ಟೇ ಅಲ್ಲದೇ, ರಾಷ್ಟ್ರ ರಾಜಧಾನಿಯಲ್ಲಿ 509 ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಕೊಲೆಗಳ ಹಿಂದಿನ ಉದ್ದೇಶ ಪ್ರೇಮ ವಿಚಾರ, ವೈಯಕ್ತಿಕ ಕಲಹ, ಡಕಾಯಿತಿ ಎಂದು ಎನ್ಸಿಆರ್ಬಿ ದತ್ತಾಂಶ ತಿಳಿಸಿದೆ.
ದೆಹಲಿಯಲ್ಲಿ 2022ರಲ್ಲಿ 16 ಜನರು ಪ್ರೀತಿ ವಿಚಾರವಾಗಿ ಜೀವ ಕಳೆದುಕೊಂಡರೆ, ಅನೈತಿಕ ಸಂಬಂಧದಿದ 13 ಮಂದಿ, ಕಳ್ಳತನದಿಂದ 10 ಮಂದಿ ಕೊಲೆಗೀಡಾಗಿದ್ದಾರೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. 1212 ಅತ್ಯಾಚಾರ ಪ್ರಕರಣ ದಾಖಲಾದರೆ, ಪೋಕ್ಸೋ ಪ್ರಕರಣದ ಅಡಿ ಒಟ್ಟಾರೆ 1530 ಪ್ರಕರಣ ದಾಖಲಾಗಿವೆ. ಜೊತೆಗೆ ಮಕ್ಕಳ ಮೇಲಿನ 7468 ಅಪರಾಧ ದಾಖಲಾಗಿದ್ದು, 22 ಮಕ್ಕಳ ಕೊಲೆ ಆಗಿದೆ.
ಮಹಿಳೆಯರ ಅಪಹರಣ ಮತ್ತು ಕಿಡ್ನಾಪ್ ಪ್ರಕರಣಗಳು 4032 ಪ್ರಕರಣಗಳು ಆದರೆ, ಮಹಿಳೆಯರ ಮೇಲಿನ ಹಲ್ಲೆ ಪ್ರಕರಣ 2029 ಆಗಿದ್ದು, ಅತ್ಯಾಚಾರ ಯತ್ನ ಪ್ರಕರಣ 4 ದಾಖಲಾಗಿವೆ.
ಉತ್ತರ ಪ್ರದೇಶದಲ್ಲಿ ಹೆಚ್ಚಾದ ಪೋಕ್ಸೋ ಪ್ರಕರಣ: ಎನ್ಸಿಆರ್ಬಿ ದತ್ತಾಂಶದ ಪ್ರಕಾರ 2022ರಲ್ಲಿ ದೇಶದಲ್ಲಿ 64,469 ಪೋಕ್ಸೋ ಪ್ರಕರಣ ದಾಖಲಾಗಿದ್ದು, ಮಕ್ಕಳ ಮೇಲಿನ ಅಪರಾಧ ದರ 14.3ರಷ್ಟು ಆಗಿದೆ. 2022ರಲ್ಲಿ 33,348 ಪ್ರಕರಣಗಳು ದಾಖಲಾದರೆ, 2022ರಲ್ಲಿ 38,444 ಪ್ರಕರಣಗಳು ಸೆಕ್ಷನ್ 4 ಮತ್ತು 6 ಅಡಿ ದಾಖಲಾಗಿವೆ.
ದತ್ತಾಂಶದಲ್ಲಿ ಪೋಕ್ಸೋ ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧದಲ್ಲಿ 38,030 ಹೆಣ್ಣುಮಕ್ಕಳು ಗುರಿಯಾಗಿದ್ದರೆ, 414 ಬಾಲಕರು ಸಂತ್ರಸ್ತರಾಗಿದ್ದಾರೆ.
ಉನ್ನು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಇಲ್ಲಿ 8,151 ಪ್ರಕರಣ ದಾಖಲಾದರೆ, ಮಹಾರಾಷ್ಟ್ರದಲ್ಲಿ 7,572, ಮಧ್ಯ ಪ್ರದೇಶದಲ್ಲಿ 5,996, ತಮಿಳುನಾಡಿನಲ್ಲಿ 4,968 ಮತ್ತು ರಾಜಸ್ಥಾನದಲ್ಲಿ 3,371 ಪ್ರಕರಣಗಳು ವರದಿಯಾಗಿವೆ.
ಇನ್ನು ಕಡಿಮೆ ಪ್ರಮಾಣದ ಪೋಕ್ಸೋ ಪ್ರಕರಣಗಳು ಗೋವಾದಲ್ಲಿ 4, ಹಿಮಾಚಲ ಪ್ರದೇಶ್ 9, ನಾಗಾಲ್ಯಾಂಡ್ 26, ಅರುಣಾಚಲ್ ಪ್ರದೇಶ 47, ಮಣಿಪುರದಲ್ಲಿ 55 ಪ್ರಕರಣಗಳು ದಾಖಲಾಗಿವೆ.
ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ 1,512 ಪ್ರಕರಣ ದಾಖಲಾದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 316, ಪುದುಚೇರಿ 105, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ 109 ಮತ್ತು ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯು ದಲ್ಲಿ 55 ಪ್ರಕರಣಗಳು ದಾಖಲಾಗಿವೆ.
2022ರಲ್ಲಿ ಮಕ್ಕಳ ಕಿಡ್ನಾಪ್ ಪ್ರಕರಣಗಳು 69,677 ವರದಿಯಾಗಿವೆ. ಮಕ್ಕಳ ಮೇಲಿನ ಅಪರಾದ ದರ 2021ರಲ್ಲಿ 33.6 ಇದ್ದರೆ, 2022ರಲ್ಲಿ 36.6ರಷ್ಟಿದೆ. ಮತ್ತೊಂದು ಆಘಾತಕಾರಿ ಅಂಶ ಎಂದರೆ 2022ರಲ್ಲಿ 99 ಮಕ್ಕಳು ಅತ್ಯಾಚಾರ ಮತ್ತು ಕೊಲೆಗೆ ಒಳಗಾಗಿದ್ದು, 1340 ಮಕ್ಕಳು ಕೊಲೆಗೀಡಾಗಿದ್ದಾರೆ.
ಅತಿ ಹೆಚ್ಚಿನ ಮಕ್ಕಳ ಮೇಲಿನ ಅಪರಾಧ ಪ್ರಕರಣ ಮಹಾರಾಷ್ಟ್ರದಲ್ಲಿ 20,762 ಪ್ರಕರಣ ದಾಖಲಾದರೆ, ಮಧ್ಯ ಪ್ರದೇಶದಲ್ಲಿ 20,415 ಮತ್ತು ಉತ್ತರ ಪ್ರದೇಶದಲ್ಲಿ 18,682 ಪ್ರಕರಣ ದಾಖಲಾಗಿವೆ. (ಐಎಎನ್ಎಸ್)
ಇದನ್ನೂ ಓದಿ: ದೇಶದಲ್ಲಿ ಅಲ್ಪ ಕುಸಿತ ಕಂಡ ಕೊಲೆ ಪ್ರಕರಣಗಳು; ಎನ್ಸಿಆರ್ಬಿ ದತ್ತಾಂಶದಲ್ಲಿ ಬಹಿರಂಗ