ಮುಂಬೈ: ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿಯ ಮೇಲೆ ಎನ್‌ಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಈ ಪ್ರಕರಣದಲ್ಲಿ 8 ಮಂದಿಯ ಹೆಸರುಗಳನ್ನು ಎನ್‌ಸಿಬಿ ಬಹಿರಂಗಪಡಿಸಿದೆ. ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜೈಸ್ವಾಲ್, ವಿಕ್ರಾಂತ್ ಚೋಕರ್, ಗೋಮಿತ್ ಚೋಪ್ರಾ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎನ್ಸಿಬಿಯ ಮುಂಬೈ ವಿಭಾಗದ ಸಮೀರ್ ವಾಂಖೆಡೆ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಶನಿವಾರ ರಾತ್ರಿ ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು 8 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕೆಲವರನ್ನು ವಶಕ್ಕೆ ಪಡೆದಿದ್ದರು.
'ಎರಡು ವಾರಗಳ ಕಾರ್ಯಾಚರಣೆ'
ಸುಮಾರು 2 ವಾರಗಳಿಂದ ಈ ಕುರಿತು ತನಿಖೆ ನಡೆಸುತ್ತಿದ್ದು, ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ. ಡ್ರಗ್ಸ್ ಪಾರ್ಟಿಗೆ ಬಾಲಿವುಡ್ ಲಿಂಕ್ ಇರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು ಎಂದು ಎನ್‌ಸಿಬಿ ಮುಖ್ಯಸ್ಥ ಎಸ್.ಎನ್. ಪ್ರಧಾನ್ ಎಎನ್ಐಗೆ ಮಾಹಿತಿ ನೀಡಿದ್ದಾರೆ.
ಮೂವರು ಮಹಿಳೆಯರು ದೊಡ್ಡ ಉದ್ಯಮಿಗಳು?
ವಶಕ್ಕೆ ಪಡೆಯಲಾದ ಮೂವರು ಮಹಿಳೆಯರು ದೆಹಲಿ ಮೂಲದವರೆಂದು ಹೇಳಲಾಗುತ್ತಿದೆ. ಅವರೆಲ್ಲರೂ ದೊಡ್ಡ ಉದ್ಯಮಿಗಳೆಂದು ತಿಳಿದುಬಂದಿದೆ. ಎಲ್ಲರನ್ನೂ ದೆಹಲಿ ಎನ್‌ಸಿಬಿ ಕಚೇರಿಯಿಂದ ವಿಚಾರಣೆ ನಡೆಸಲಾಗುತ್ತಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎನ್‌ಸಿಬಿ ಹೇಳಿದೆ.
ಇದನ್ನೂ ಓದಿ: ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ: ಬಾಲಿವುಡ್ 'ಸೂಪರ್ ಸ್ಟಾರ್' ಪುತ್ರ ಸೇರಿ ಹಲವರು ಎನ್‌ಸಿಬಿ ವಶಕ್ಕೆ