ಮುಂಬೈ: ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ 'ಅಪಹರಣ ಮತ್ತು ಸುಲಿಗೆ ಪ್ರಕರಣ'ದ ಸಂಚಿನ ಭಾಗವಾಗಿದ್ದರು ಎಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕ ಮೋಹಿತ್ ಭಾರತೀಯ ಅವರು ಈ ಸಂಚಿನ ಮಾಸ್ಟರ್ ಮೈಂಡ್. ವಾಂಖೆಡೆ ಅವರು ಓಶಿವಾರ ನಗರದ ಸ್ಮಶಾನವೊಂದಲ್ಲಿ ಭಾರತೀಯ ಅವರನ್ನು ಭೇಟಿಯಾಗಿದ್ದರು. ಆದರೆ ಅವರ (ವಾಂಖೆಡೆ) ಅದೃಷ್ಟದಿಂದಾಗಿ ಮತ್ತು ಅಲ್ಲಿನ ಸಿಸಿಟಿವಿ ಕಾರ್ಯನಿರ್ವಹಿಸದ ಕಾರಣ ನಮಗೆ ದೃಶ್ಯಾವಳಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಭಯದಿಂದ ವಾಂಖೆಡೆ ತನ್ನನ್ನು ಹಿಂಬಾಲಿಸಲಾಗುತ್ತಿದೆ ಎಂದು ಸುಳ್ಳು ದೂರು ದಾಖಲಿಸಿದ್ದರು ಎಂದು ಹೇಳಿದರು.
ಕಳೆದ ತಿಂಗಳು ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡ ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿತ್ತು. ಈ ವೇಳೆ ಅಲ್ಲಿದ್ದ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ನಂತರ ಬಾಂಬೆ ಹೈಕೋರ್ಟ್ ಆರೋಪಿಗಳಿಗೆ ಜಾಮೀನು ನೀಡಿತ್ತು. ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪ್ರಕರಣ ನಕಲಿ ಎಂದು ಪುನರುಚ್ಚರಿಸಿದ ಮಲಿಕ್, ವಾಂಖೆಡೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.
'ನನ್ನ ಹೋರಾಟವು ಎನ್‌ಸಿಬಿ ಅಥವಾ ಬಿಜೆಪಿ ವಿರುದ್ಧ ಅಲ್ಲ. ಇದು ಅಕ್ರಮಗಳಲ್ಲಿ ತೊಡಗಿರುವವರ ವಿರುದ್ಧ. ದಯವಿಟ್ಟು ಬೆಂಬಲಿಸಿ. ಡ್ರಗ್ಸ್ ಹಾವಳಿಯನ್ನು ನಿರ್ಮೂಲನೆ ಮಾಡಲು ನಾನೂ ಸಹ ಬೆಂಬಲಿಸುತ್ತೇನೆ' ಎಂದು ಮಲಿಕ್ ಮನವಿ ಮಾಡಿದ್ದಾರೆ.