ಮುಂಬೈ : ಮಹಾನಗರಿ ಮುಂಬೈಗೆ ಮಾದಕ ವಸ್ತು ಕಳ್ಳಸಾಗಣೆ ಮಾಡಿರುವ ಹಿನ್ನೆಲೆ ಭೂಗತ ಜಗತ್ತಿನ ಡಾನ್ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಎನ್‌ಸಿಬಿ ಬಂಧಿಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ನಿಂದ ಮುಂಬೈಗೆ ಚರಸ್ ಕಳ್ಳಸಾಗಣೆ ಮಾಡಿರುವ ಹಿನ್ನೆಲೆ ಥಾಣೆ ಜೈಲಿನಲ್ಲಿದ್ದ ಇಕ್ಬಾಲ್ ಕಸ್ಕರ್‌ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ 25 ಕೆಜಿ ಚರಸ್ ಅನ್ನು ಮುಂಬೈಗೆ ತರಲಾಗಿತ್ತು. ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ ಮೂಲಕ ಚರಸ್ ಮುಂಬೈ ತಲುಪಿದೆ ಎಂದು ಎನ್‌ಸಿಬಿ ತನಿಖೆಯಿಂದ ತಿಳಿದು ಬಂದಿತ್ತು. ಈಗಾಗಲೇ ಡಾನ್ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಿಲ್ಡರ್ ಒಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಇಕ್ಬಾಲ್ ಕಸ್ಕರ್‌ನನ್ನು ಈ ಹಿಂದೆ ಬಂಧಿಸಲಾಗಿತ್ತು. ಇದಕ್ಕೂ ಮೊದಲು ಚರಸ್ ಕಳ್ಳಸಾಗಣೆ ಪ್ರಕರಣದಲ್ಲಿ ಆರಿಫ್ ಭುಜ್ವಾಲಾ, ಚಿಕು ಪಠಾಣ್ ಮತ್ತು ಇತರ ಮಾದಕ ವಸ್ತು ಕಳ್ಳಸಾಗಾಣಿಕೆದಾರರನ್ನು ಕೆಲವು ತಿಂಗಳ ಹಿಂದೆ ಎನ್‌ಸಿಬಿ ಬಂಧಿಸಿತ್ತು.
ಈ ಬಂಧಿತರಲ್ಲಿ ಚಿಕು ಪಠಾಣ್ ಡಾನ್ ದಾವೂದ್ ಇಬ್ರಾಹಿಂ ಅವರ ಸಹಚರ ಎಂಬುದು ತನಿಖೆಯಲ್ಲಿ ತಿಳಿದು ಬಂದಿತ್ತು. ಇದೇ ವೇಳೆ ದಾವೂದ್ ಸಹೋದರ ಇಕ್ಬಾಲ್ ಹೆಸರನ್ನು ಸಹ ಚಿಕು ಬಾಯ್ಬಿಟ್ಟಿದ್ದ ಎನ್ನಲಾಗಿದೆ.