ಬಸ್ತಾರ್ (ಛತ್ತೀಸ್ಗಢ) : ಛತ್ತೀಸ್ಗಢ ವಿಧಾನಸಭೆಗೆ ಇಂದು ನಡೆಯುತ್ತಿರುವ ಮೊದಲ ಹಂತದ ಮತದಾನದಲ್ಲಿ ಕಂಕೇರ್, ನಾರಾಯಣಪುರ ಮತ್ತು ದಾಂತೇವಾಡ, ಬಸ್ತಾರ್ನಲ್ಲಿ ನಕ್ಸಲೀಯರು ಹಿಂಸಾಚಾರ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ನಕ್ಸಲೀಯರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ರೈತನಿಗೆ ಗುಂಡು ತಾಕಿದ್ದರೆ, ಹಲವಾರು ನಕ್ಸಲರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಆದರೆ, ಈವರೆಗೂ ಯಾರ ಶವವೂ ಪತ್ತೆಯಾಗಿಲ್ಲ.
ಮಡಪಖಂಜೂರ್ ಮತ್ತು ಕಂಕೇರ್‌ನ ಬಳಿಯ ಅರಣ್ಯದಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಅರ್ಧಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದಿದೆ. ಬಳಿಕ ನಕ್ಸಲೀಯರು ಅಲ್ಲಿಂದ ಪರಾರಿಯಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ರೈತನ ಹೊಟ್ಟೆಗೆ ಗುಂಡು ತಗುಲಿದೆ. ರೈತ ರಾಸುಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದ. ಈ ವೇಳೆ ಗುಂಡು ಬಂದು ತಾಕಿದೆ. ಘಟನೆ ನಡೆದ ಸ್ಥಳದಿಂದ 47 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೇಕ ನಕ್ಸಲೀಯರ ಹತ್ಯೆ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಐಇಡಿ ಪತ್ತೆ, ಗುಂಡಿನ ಚಕಮಕಿ: ನಾರಾಯಣಪುರದ ಓರಕ್ಷಾದ ತಾದೂರಿನಲ್ಲಿ ಎಸ್‌ಟಿಎಫ್ ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಗುದ್ರಿ ಪ್ರದೇಶದಲ್ಲಿ ನಕ್ಸಲರು ಹಿಂಸಾಚಾರಕ್ಕೆ ಮುಂದಾದಾಗ ಭದ್ರತಾ ಪಡೆಗಳು ದಾಳಿ ನಡೆಸಿವೆ. ನಕ್ಸಲರು ಕಾಡಿನೊಳಕ್ಕೆ ಓಡಿಹೋಗಿದ್ದಾರೆ. ಇನ್ನು, ದಾಂತೇವಾಡ ವಿಧಾನಸಭಾ ವ್ಯಾಪ್ತಿಯ ಅರನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್ ಯೋಧರು ಎರಡು ಐಇಡಿಗಳನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಇಲ್ಲಿ ನಕ್ಸಲೀಯರ ಸಂಚನ್ನು ವಿಫಲಗೊಳಿಸಿದ್ದಾರೆ.
ಬಿಜಾಪುರದ ಗಂಗಲೂರಿನಲ್ಲಿ ನಕ್ಸಲೀಯರ ಎನ್ಕೌಂಟರ್ ನಡೆದಿದೆ. ಸಿಆರ್‌ಪಿಎಫ್ 85 ಬೆಟಾಲಿಯನ್ ಮೂವರು ನಕ್ಸಲೀಯರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಈ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿವೆ.
ಸುಕ್ಮಾದಲ್ಲಿ ಸಂಚು ವಿಫಲ: ಸುಕ್ಮಾದಲ್ಲಿ ಮತದಾನದ ವೇಳೆ ಮತ ಕೇಂದ್ರದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿ ನಕ್ಸಲೀಯರ ದಾಳಿ ನಡೆದಿದೆ. ಭದ್ರತಾ ಪಡೆಗಳು ದಾಳಿಯನ್ನು ಹಿಮ್ಮೆಟ್ಟಿಸಿದ್ದಾರೆ. ನಕ್ಸಲೀಯರು ಸ್ಥಳದಿಂದ ಪರಾರಿಯಾಗಿ ಕಾಡಿನೊಳಕ್ಕೆ ನುಸುಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮತದಾನ ನಡೆಯುತ್ತಿದ್ದು, ಯಾವುದೇ ಭಯವಿಲ್ಲದೆ ಜನರು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಇಲ್ಲಿ ಮತದಾನ ನಡೆಯಲಿದೆ ಎಂದರು.
ಇಂದು ಬೆಳಿಗ್ಗೆ ಬಂಡಾ ಮತಗಟ್ಟೆಯಿಂದ 2 ಕಿಲೋಮೀಟರ್ ದೂರದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿ ಮೇಲೆ ನಕ್ಸಲೀಯರು ಗುಂಡಿನ ದಾಳಿ ನಡೆಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. 10 ನಿಮಿಷಗಳ ನಂತರ ನಕ್ಸಲ್ ಕಡೆಯಿಂದ ಗುಂಡಿನ ದಾಳಿ ನಿಂತಿತು. ಎಲ್ಲಾ ಸೈನಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ಸುಕ್ಮಾದಲ್ಲಿ ಐಇಡಿ ಸ್ಫೋಟ: ಇಂದು ಬೆಳಗ್ಗೆ ಸುಕ್ಮಾದಲ್ಲಿ ಐಇಡಿ ಸ್ಫೋಟ ಸಂಭವಿಸಿದೆ. ಇದರಲ್ಲಿ ಕೋಬ್ರಾ ಬೆಟಾಲಿಯನ್ ಯೋಧ ಗಾಯಗೊಂಡಿದ್ದಾರೆ. ತೊಂಡಮಾರ್ಕಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಕಾವಲು ಕಾಯುತ್ತಿದ್ದಾಗ ಐಇಡಿ ಸ್ಫೋಟವಾಗಿದೆ. ಗಾಯಗೊಂಡ ಯೋಧನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಇತ್ತ, ಅತಿ ಹೆಚ್ಚು ನಕ್ಸಲ್ ಪೀಡಿತ ಪ್ರದೇಶವಾದ ಬಸ್ತಾರ್ನಲ್ಲಿ ಬಿಗಿ ಭದ್ರತೆಯ ನಡುವೆ ಮತದಾನ ನಡೆಯುತ್ತಿದೆ. ಸುಮಾರು 40 ಸಾವಿರ ಭದ್ರತಾ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ. ಮತಗಟ್ಟೆಯ ಜೊತೆಗೆ ಕೇಂದ್ರದ ಸುತ್ತಲೂ ನಿಗಾ ವಹಿಸಲಾಗಿದೆ. ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಲಾಗಿದೆ. ಡಿಆರ್‌ಜಿ, ಬಸ್ತಾರಿಯಾ ಫೈಟರ್ಸ್, ಅರೆಸೇನಾ ಪಡೆ ಮತ್ತು ಸಿಎಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಛತ್ತೀಸ್ಗಢ ಚುನಾವಣೆ: ಮೊದಲ ಹಂತದ ಮತದಾನಕ್ಕೆ ಮುನ್ನ ಬಾಂಬ್ ಸ್ಫೋಟ: ಇಬ್ಬರು ಚುನಾವಣಾಧಿಕಾರಿಗಳು, ಯೋಧನಿಗೆ ಗಾಯ