ಮುಂಬೈ: ಅಕ್ರಮ ಹಣ ವರ್ಗಾವಣೆ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಕಸ್ಟಡಿಯಲ್ಲಿರುವ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮೂತ್ರಪಿಂಡದ ಸಮಸ್ಯೆಯಿಂದಾಗಿ ಇಲ್ಲಿನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಬಗ್ಗೆ ನವಾಬ್ ಮಲಿಕ್ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನವಾಬ್ ಮಲಿಕ್ರ ಆರೋಗ್ಯ ಹದಗೆಟ್ಟಿದೆ. ಮಾನವೀಯ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದಾರೆ. ಜಾಮೀನು ಅರ್ಜಿಯು ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಅರ್ಜಿಯ ಕುರಿತು ಮುಂಬೈ ಸೆಷನ್ಸ್ ನ್ಯಾಯಾಲಯದಿಂದ ತಕ್ಷಣದ ನಿರ್ಧಾರ ಕೈಗೊಳ್ಳಬೇಕು. ಮಲಿಕ್ ಅವರ ಆರೋಗ್ಯ ಸ್ಥಿತಿಯನ್ನು ಕೋರ್ಟ್ಗೆ ಇಡಿ ಅಧಿಕಾರಿಗಳು ಏಕೆ ತಿಳಿಸಲಿಲ್ಲ ಎಂದೂ ಪ್ರಶ್ನಿಸಿದ್ದಾರೆ.
ಬಳಿಕ ನ್ಯಾಯಾಲಯವು ಮಲಿಕ್ ಅವರ ಅನಾರೋಗ್ಯದ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಆಸ್ಪತ್ರೆಯಿಂದ ವರದಿಯನ್ನು ಕೇಳಿದೆ. ಅವರ ಚಿಕಿತ್ಸೆಯನ್ನು ಆಸ್ಪತ್ರೆಯಲ್ಲಿ ಮುಂದುವರಿಸಬಹುದೇ ಎಂಬುದರ ಕುರಿತು ಮೇ 5ರೊಳಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಇದಕ್ಕೂ ಮೊದಲು, ನವಾಬ್ ಮಲಿಕ್ ಮೂತ್ರಪಿಂಡದ ಕಾಯಿಲೆ ಮತ್ತು ಕಾಲುಗಳಲ್ಲಿ ಊತ ಸೇರಿದಂತೆ ಅನೇಕ ಕಾಯಿಲೆಗಳನ್ನು ಬಳಲುತ್ತಿದ್ದಾರೆ ಎಂದು ವೈದ್ಯಕೀಯ ವರದಿಯ ಆಧಾರದ ಮೇಲೆ 6 ವಾರಗಳ ಮಧ್ಯಂತರ ಜಾಮೀನು ನೀಡಲು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಓದಿ: 38 ವರ್ಷದ ಶಿಕ್ಷಕಿಯನ್ನು 2ನೇ ವಿವಾಹವಾದ 66 ವರ್ಷದ ಮಾಜಿ ಕ್ರಿಕೆಟಿಗ ಅರುಣ್ ಲಾಲ್