ನವದೆಹಲಿ : ಉತ್ತರಾಖಂಡದ ನೂತನ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ರು. ಈ ಹೇಳಿಕೆಗೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ.
ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗದ ಕಾರ್ಯಾಗಾರವನ್ನು ಉದ್ಘಾಟಿಸಿದ ಬಳಿಕ, ಸಿಎಂ ಮಹಿಳಾ ಬಟ್ಟೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ಪ್ರಕಾರ ಮಹಿಳೆಯರು ಹರಿದ ಜೀನ್ಸ್ ಧರಿಸುವುದು ಸಂಸ್ಕೃತಿಯಲ್ಲವಂತೆ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹರಿದ ಜೀನ್ಸ್ ಧರಿಸುತ್ತಿದ್ದಾರೆ. ಇದು ಸರಿಯೇ.. ಇದರಿಂದ ನಮ್ಮ ಮಕ್ಕಳಿಗೆ ಸಂಸ್ಕಾರವೆಂಬುದು ಹೇಗೆ ಬರುತ್ತದೆ. ಇದು ಅವರ ಪೋಷಕರ ಮೇಲೆ ಅವಲಂಬಿತವಾಗಿರುತ್ತದೆ. ಅಲ್ಲದೇ ತುಂಬಾ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ ಎಂದಿದ್ದರು.
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಎನ್ನುವ ಮೂಲಕ ಈ ವಿವಾದಾತ್ಮಕ ಹೇಳಿಕೆಗೆ ನಟ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ತಿರುಗೇಟು ನೀಡಿದ್ದಾರೆ.
ಓದಿ:ರಿಪ್ಡ್ ಜೀನ್ಸ್ ಧರಿಸಿ ಮಹಿಳೆ ಎನ್‌ಜಿಒ ನಡೆಸುತ್ತಿರುವುದನ್ನು ನೋಡಿ ಆಘಾತಕ್ಕೊಳಗಾದೆ : ಉತ್ತರಾಖಂಡ ಸಿಎಂ
ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನವ್ಯಾ ಹೀಗೆ ಬರೆದಿದ್ದಾರೆ. "ನಮ್ಮ ಬಟ್ಟೆಗಳನ್ನು ಬದಲಾಯಿಸುವ ಮೊದಲು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ಇಲ್ಲಿ ಆಶ್ಚರ್ಯಕರವಾದ ವಿಷಯವೆಂದರೆ ನೀವು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದೀರಿ ಎಂಬುದು" ಅಂತಾ ಕಿಡಿಕಾರಿದ್ದಾರೆ.
ತಿರತ್ ಹೇಳಿಕೆ ತೀವ್ರ ಕೋಪವನ್ನು ವ್ಯಕ್ತಪಡಿಸಿರುವ ನವ್ಯಾ, ಆ ಪೋಸ್ಟ್ ನಂತರ, ತಮ್ಮ ಹರಿದ ಜೀನ್ಸ್ವೊಂದರ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಬಳಿಕ ನಾನು ಸಹ ಹರಿದ ಜೀನ್ಸ್ ಧರಿಸುತ್ತೇನೆ. ಬಹಳ ಹೆಮ್ಮೆಯಿಂದ ಧರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗ್ತಿದೆ.