ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿನ ದಿಢೀರ್ ಬೆಳವಣಿಗೆಯಲ್ಲಿ ಪಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ಇಂದು ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಕಾಂಗ್ರೆಸ್ ಶಾಸಕ ಬಾವಾ ಹೆನ್ರಿ, ನವಜೋತ್ ಸಿಂಗ್ ಸಿಧು ಅವರ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಪಕ್ಷದೊಳಗಡೆ ಮೂರ್ನಾಲ್ಕು ಸಮಸ್ಯೆಗಳಿದ್ದು, ಅವುಗಳನ್ನು ಅತಿ ಶೀಘ್ರದಲ್ಲೇ ಹೈಕಮಾಂಡ್ ಬಗೆಹರಿಸುತ್ತದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಸಿಧು ಅವರ ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಚಿವ ಪರಗತ್ ಸಿಂಗ್ ಹಾಗೂ ಅಮರೀಂದರ್ ಸಿಂಗ್ ರಾಜಾ ವಾರ್ನಿಂಗ್, ಪಕ್ಷದೊಳಗಡೆ ಕೆಲ ಸಣ್ಣ ಪುಟ್ಟ ಸಮಸ್ಯೆಗಳಿವೆ. ತಪ್ಪು ಗ್ರಹಿಕೆಗಳಿಂದ ಹೀಗಾಗಿದೆ. ನಾಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೇವೆ ಎಂದಿದ್ದಾರೆ.
ರಾಜ್ಯದಲ್ಲಿ ಚರಣಜಿತ್ ಸಿಂಗ್ ಚನ್ನಿ ನೇತೃತ್ವದ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಪಂಜಾಬ್ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ರಾಷ್ಟ್ರೀಯ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಧು, ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣಕ್ಕಾಗಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಾರೆ. ಹೀಗಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ. ಆದರೆ ಪಕ್ಷದಲ್ಲಿದ್ದುಕೊಂಡು ಸೇವೆ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ.. ರಾಜಕೀಯ ವಿಪ್ಲವ ಕಾರಣವಾಯ್ತೇ!?