ಚಂಡೀಗಢ (ಪಂಜಾಬ್): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಸೋಮವಾರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಮ್ಮ ಪತ್ನಿ ಜೊತೆಗಿನ ಚಿತ್ರದ ಸಮೇತ ನವಜೋತ್ ಸಿಧು ಟ್ವೀಟ್ ಮಾಡಿದ್ದಾರೆ.
ಡಾ.ನವಜೋತ್ ಕೌರ್ ಸಿಧು ಎಡ ಸ್ತನದಲ್ಲಿ 2ನೇ ಹಂತದ ಕಾರ್ಸಿನೋಮ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅವರನ್ನು ಇಂಡಸ್ ಇಂಟರ್ ನ್ಯಾಷನಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಭೂಪಿಂದರ್ ಸಿಂಗ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಭೂಪಿಂದರ್ ಸಿಂಗ್ ಪ್ರಕಾರ, ಕೌರ್ ಅವರಿಗೆ ಕಿಮೋಥೆರಪಿಯ ಅವಶ್ಯಕತೆಯಿದ್ದು, ಹಾರ್ಮೋನ್ ಚಿಕಿತ್ಸೆ ಮತ್ತು ರೇಡಿಯೊಥೆರಪಿಯನ್ನು ಪ್ರತಿ 5 ರಿಂದ 6 ತಿಂಗಳಿಗೊಮ್ಮೆ ಮಾಡಲಾಗುತ್ತದೆ.
ಇದನ್ನೂ ಓದಿ: ಭಾವುಕರಾಗಿ ಟ್ವೀಟ್ ಮಾಡಿದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ನವಜೋತ್ ಸಿಧು ಪತ್ನಿ..
ಪತ್ನಿಯ ಅಪರೇಷನ್ ಬಗ್ಗೆ ನವಜೋತ್ ಸಿಧು ಟ್ವೀಟ್ ಮಾಡಿ, ''ಎಲ್ಲರ ಹಾರೈಕೆ ಮತ್ತು ಆಶೀರ್ವಾದಗಳೊಂದಿಗೆ ನನ್ನ ಹೆಂಡತಿಯ ಆಪರೇಷನ್ ಯಶಸ್ವಿಯಾಗಿದೆ. ಆಕೆಯ ವರದಿ ಸಕಾರಾತ್ಮಕವಾಗಿದೆ. ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಕೌರ್ ನಡವಳಿಕೆ ಮಗುವಿನಂತಿದೆ. ಶಿಸ್ತುಬದ್ಧ ಚಿಕಿತ್ಸೆ ಮತ್ತು ಆಹಾರ ಕ್ರಮದಿಂದ ಶೀಘ್ರದಲ್ಲೇ ಸಂಪೂರ್ಣ ಆರೋಗ್ಯವಂತರಾಗುತ್ತಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನವಜೋತ್ ಕೌರ್ ತಮ್ಮ ಕೂದಲನ್ನು ದಾನ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಎರಡನೆಯ ಕೀಮೋಥೆರಪಿಯ ನಂತರ ನನಗೆ ಬೇಕಾಗುವ ನೈಸರ್ಗಿಕ ಕೂದಲಿನ ವಿಗ್‌ನ ಬೆಲೆಯ ಬಗ್ಗೆ ನಾನು ವಿಚಾರಿಸಿದ್ದೆ. ಇದರ ಬೆಲೆ ಸುಮಾರು 50 ರಿಂದ 70,000 ರೂಪಾಯಿ ಆಗುತ್ತದೆ. ಹಾಗಾಗಿ ನಾನು ನನ್ನ ಕೂದಲನ್ನು ಕ್ಯಾನ್ಸರ್ ರೋಗಿಗೆ ದಾನ ಮಾಡಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: 10 ತಿಂಗಳ ನಂತರ ಜೈಲಿನಿಂದ ಹೊರ ಬಂದ ನವಜೋತ್ ಸಿಂಗ್ ಸಿಧು: ಭದ್ರತೆ ಕಡಿತ
ಇತ್ತೀಚೆಗೆ ಜೈಲಿನಿಂದ ಬಂದಿರುವ ಸಿಧು: 34 ವರ್ಷದ ಹಿಂದಿನ ರೋಡ್ ರೇಜ್ ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ನವಜೋತ್ ಸಿಂಗ್ ಸಿಧು ಇದೇ ಏಪ್ರಿಲ್ 1ರಂದು ಜೈಲಿನಿಂದ ಬಿಡುಗಡೆಯಾಗಿದ್ದರು. ಕಳೆದ ಮೇ ತಿಂಗಳಿಂದ ಪಟಿಯಾಲ ಸೆಂಟ್ರಲ್ ಜೈಲಿನಲ್ಲಿದ್ದ ಅವರು ಹೊರ ಬಂದಿದ್ದಾರೆ. ಪತಿ ಜೈಲಿನಲ್ಲಿದ್ದಾಗ ಪತ್ನಿ ನವಜೋತ್ ಕೌರ್ ನಿರಂತರವಾಗಿ ಟ್ವೀಟ್ ಮಾಡಿದ್ದರು. ಸಿಧು ಜೈಲಿನಿಂದ ಬಿಡುಗಡೆ ವಿಳಂಬ ಸಂಬಂಧ ಟ್ವೀಟ್ ಮಾಡಿ ಎರಡ್ಮೂರು ಬಾರಿ ಆಕ್ರೋಶ ಸಹ ಹೊರಹಾಕಿದ್ದರು.
''ತನ್ನ ಪತಿ ನವಜೋತ್ ಸಿಧು ಪದೇ ಪದೇ ನ್ಯಾಯದಿಂದ ವಂಚಿತರಾಗಿದ್ದಾರೆ. ಸತ್ಯವು ಎಷ್ಟು ಶಕ್ತಿಯುತವಾಗಿದೆ ಎಂದರೆ, ಅದನ್ನು ಬೆಂಕಿಯಿಂದ ಪದೇ ಪದೇ ಪರೀಕ್ಷಿಸಲಾಗುತ್ತಿದೆ. ಪ್ರಸ್ತುತ ಕಲಿಯುಗ ಇದೆ. ಕ್ಷಮಿಸಿ ನಿಮಗಾಗಿ ನಾನು ಕಾಯಲು ಸಾಧ್ಯವಿಲ್ಲ. ಕ್ಯಾನ್ಸರ್ ಎರಡನೇ ಹಂತವು ಅತ್ಯಂತ ಅಪಾಯಕಾರಿಯಾಗಿದೆ'' ಎಂದು ಒಮ್ಮೆ ಕೌರ್ ಟ್ವೀಟ್ ಮಾಡಿದ್ದರು.
ಅಲ್ಲದೇ, ''ದರೋಡೆಕೋರರು, ಡ್ರಗ್ ಉದ್ಯಮಿಗಳು, ಹಾರ್ಡ್‌ಕೋರ್ ಕ್ರಿಮಿನಲ್‌ಗಳು, ಅತ್ಯಾಚಾರಿಗಳು ಜಾಮೀನು ಪಡೆಯಬಹುದು ಮತ್ತು ಸರ್ಕಾರದ ನಿಯಮಗಳಿಂದ ಲಾಭ ಪಡೆಯಬಹುದು. ಆದರೆ ಸತ್ಯವಂತ, ಪ್ರಾಮಾಣಿಕ ವ್ಯಕ್ತಿ ತಾನು ಮಾಡದ ಅಪರಾಧಕ್ಕಾಗಿ ನರಳುವಂತಾಗಿದೆ'' ಎಂದೂ ಮತ್ತೊಮ್ಮೆ ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ನವಜೋತ್ ಸಿಂಗ್ ಸಿಧುಗೆ ದೊರೆಯದ ಬಿಡುಗಡೆ ಭಾಗ್ಯ: ಸಿಟ್ಟಿಗೆದ್ದ ಪತ್ನಿಯ ಪ್ರತಿಕ್ರಿಯೆ ಹೇಗಿದೆ ಗೊತ್ತಾ?