ಚಂಡೀಗಢ (ಪಂಜಾಬ್): ಲಖಿಂಪುರ ಖೇರಿ ಹಿಂಸಾಚಾರ ವಿರೋಧಿಸಿ ಚಂಡೀಗಢದ ರಾಜ್ಯಪಾಲರ ಭವನದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸೇರಿದಂತೆ ಅವರ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರಪ್ರದೇಶದ ಲಖಿಂಪುರದಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಒಟ್ಟು 8 ಮಂದಿ ಮೃತಪಟ್ಟಿದ್ದರು. ಈ ಘಟನೆಯನ್ನು ವಿರೋಧಿಸಿ ಕೇಂದ್ರ ಸಚಿವ ಅಜಯ್ ಮಿಶ್ರಾ ಬಂಧನಕ್ಕೆ ಆಗ್ರಹಿಸಿ ನವಜೋತ್ ಸಿಂಗ್ ಸಿಧು ಪ್ರತಿಭಟನೆ ನಡೆಸುತ್ತಿದ್ದರು. ಇವರಿಗೆ ಕಾಂಗ್ರೆಸ್ ಶಾಸಕರು, ಪಿವೈಸಿ ಅಧ್ಯಕ್ಷ ಬರಿಂದರ್ ದಿಲ್ಲೋನ್ ಸೇರಿದಂತೆ ಬೆಂಬಲಿಗರು ಸಾಥ್ ನೀಡಿದ್ದರು. ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆಯೂ ಪ್ರತಿಭಟನಾನಿರತರು ಆಗ್ರಹಿಸಿದ್ದಾರೆ.
ಓದಿ: ಲಖಿಂಪುರ ಖೇರಿಗೆ ತೆರಳುತ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಬಂಧನ- ಕಾಂಗ್ರೆಸ್ ಆರೋಪ
ಘಟನಾ ಸ್ಥಳಕ್ಕೆ ಭೇಟಿ ನೀಡಲು ಪಂಜಾಬ್ ಸಿಎಂಗೆ ಅನುಮತಿ ನಿರಾಕರಣೆ : ಏತನ್ಮಧ್ಯೆ, ಉತ್ತರಪ್ರದೇಶದ ಹಿಂಸಾಚಾರ ಪೀಡಿತ ಜಿಲ್ಲೆಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಗೆ ಉತ್ತರಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಹಿಂದೆ, ಪಂಜಾಬ್ ಉಪ ಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವಾ ಅವರಿಗೂ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು.
ಲಖಿಂಪುರ ಖೇರಿಯ ಹಿಂಸಾಚಾರ: ಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ನೂತನ ಕೃಷಿ ಕಾಯ್ಧೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದರು. ಅಲ್ಲಿಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಿದ್ದನ್ನ ವಿರೋಧಿಸಿ ರೈತರು ಲಖಿಂಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ಲಖಿಂಪುರದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎರಡು ಕಾರುಗಳು ಅವರ ಮೇಲೆ ಹರಿದು, ಇಬ್ಬರು ರೈತರು ಮೃತಪಟ್ಟಿದ್ದಾರೆ. ಈ ವೇಳೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಒಂದು ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ, ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು.
ಓದಿ: ಲಖಿಂಪುರ ಖೇರಿ ಹಿಂಸಾಚಾರ: ಸಚಿವ ಅಜಯ್ ಮಿಶ್ರಾ, ಪುತ್ರ ಆಶೀಶ್ ಮಿಶ್ರಾ ಹೇಳಿದ್ದೇನು?