ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಏಳು ಹೊಸ ರಕ್ಷಣಾ ಕಂಪನಿಗಳನ್ನು ಉದ್ಘಾಟಿಸಿದರು ಮತ್ತು ಈ ಕಂಪನಿಗಳು ದೇಶದ ಶಕ್ತಿಯ ಆಧಾರವಾಗುತ್ತವೆ ಎಂದು ಹೇಳಿದರು.
ಭಾರತೀಯ ಶಸ್ತ್ರಾಸ್ತ್ರ ಕಾರ್ಖಾನೆಗಳ ಭವ್ಯ ಕಾಲದ ಬಗ್ಗೆ ಮಾತನಾಡಿದ ಅವರು, ಈ ಕಂಪನಿಗಳ ಉನ್ನತೀಕರಣವನ್ನು ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಕಡೆಗಣಿಸಲಾಗಿದೆ. ಇದರಿಂದಾಗಿ ದೇಶವು ತನ್ನ ಅಗತ್ಯತೆಗಳಿಗಾಗಿ ವಿದೇಶಿ ಪೂರೈಕೆದಾರರನ್ನು ಅವಲಂಬಿಸಿದೆ.
ಈ ಏಳು ರಕ್ಷಣಾ ಕಂಪನಿಗಳು ಈ ಪರಿಸ್ಥಿತಿ ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಕಂಪನಿಗಳು ಉತ್ಪಾದನಾ ಉಪಕರಣಗಳ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿರುವುದಲ್ಲದೆ ಜಾಗತಿಕ ಬ್ರಾಂಡ್ ಆಗುತ್ತವೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸಲಿದೆ
ದೇಶದ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ಸಾಧ್ಯತೆಗಳೊಂದಿಗೆ ಜೋಡಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ -2020)ಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪುನರುಚ್ಚರಿಸಿದ್ದಾರೆ.
ಸೂರತ್‌ನಲ್ಲಿ ಸೌರಾಷ್ಟ್ರ ಪಟೇಲ್ ಸೇವಾ ಸಮಾಜದಿಂದ ನಿರ್ಮಿಸಲಾದ ಹಾಸ್ಟೆಲ್ ಹಂತ-1 (ಬಾಲಕರ ಹಾಸ್ಟೆಲ್)ನ ಭೂಮಿ ಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಸ್ಥಳೀಯ ಭಾಷೆಯಲ್ಲಿ ವೃತ್ತಿಪರ ಕೋರ್ಸ್‌ಗಳ ಆಯ್ಕೆ ಸಾಧ್ಯ ಎಂದು ತಿಳಿಸಿದ್ದಾರೆ.
ಈಗ ಶಿಕ್ಷಣವು ಪದವಿ ಗಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಆದರೆ, ಕೌಶಲ್ಯಗಳ ಜೊತೆ ಸಂಪರ್ಕ ಹೊಂದಿದೆ. ದೇಶವು ತನ್ನ ಸಾಂಪ್ರದಾಯಿಕ ಕೌಶಲ್ಯಗಳನ್ನು ಆಧುನಿಕ ಸಾಧ್ಯತೆಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಹೇಳಿದ್ದಾರೆ.
ಹಾಸ್ಟೆಲ್ ಕಟ್ಟಡವು ಸುಮಾರು 1500 ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯಗಳನ್ನು ಹೊಂದಿದೆ. ಇದು ಒಂದು ಸಭಾಂಗಣ ಮತ್ತು ವಿದ್ಯಾರ್ಥಿಗಳಿಗಾಗಿ ಮೀಸಲಾದ ಗ್ರಂಥಾಲಯವನ್ನು ಸಹ ಒಳಗೊಂಡಿದೆ.
ಸುಮಾರು 500 ಹುಡುಗಿಯರಿಗೆ ಅವಕಾಶ ಕಲ್ಪಿಸಲು ಹಾಸ್ಟೆಲ್ ಹಂತ -2ರ ನಿರ್ಮಾಣವು ಮುಂದಿನ ವರ್ಷದಿಂದ ಆರಂಭವಾಗಲಿದೆ. ಸೌರಾಷ್ಟ್ರ ಪಟೇಲ್ ಸೇವಾ ಸಮಾಜವು 1983 ರಲ್ಲಿ ಸ್ಥಾಪಿತವಾದ ನೋಂದಾಯಿತ ಟ್ರಸ್ಟ್ ಆಗಿದೆ. ಇದರ ಮುಖ್ಯ ಉದ್ದೇಶ ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಪರಿವರ್ತನೆಯಾಗಿದೆ.
ಓದಿ: ಜೈಲಿನಲ್ಲಿರುವ ಆರ್ಯನ್ ಖಾನ್ಗೆ ₹4,500 ಮನಿ ಆರ್ಡರ್, ಪೋಷಕರೊಂದಿಗೆ ವಿಡಿಯೋ ಕಾಲ್!