ನವದೆಹಲಿ: ಜನವರಿ 26 ರಂದು ತ್ರಿವರ್ಣ ಧ್ವಜಕ್ಕೆ ಅವಮಾನವಾಗಿದ್ದಕ್ಕೆ ಭಾರತ ಸಾಕ್ಷಿಯಾಗಿದ್ದು, ಇಡೀ ರಾಷ್ಟ್ರವೇ ಆಘಾತಕ್ಕೊಳಗಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದರು.
ಈ ವರ್ಷದ ಮೊದಲ ಹಾಗೂ 73ನೇ ಆವೃತ್ತಿಯ 'ಮನ್ ಕಿ ಬಾತ್'ನಲ್ಲಿ ದೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಹಿಂಸಾಚಾರದ ಬಗ್ಗೆ ಮಾತನಾಡುತ್ತಾ, ರೈತರ ಆಕ್ರೋಶ, ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರದ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡರು. ಕೃಷಿಯನ್ನು ಆಧುನೀಕರಿಸುವ ದಿಕ್ಕಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಪ್ರಯತ್ನಗಳು ಭವಿಷ್ಯದಲ್ಲಿಯೂ ಮುಂದುವರಿಯುತ್ತವೆ ಎಂದರು.
ಭಾರತ ಕ್ರಿಕೆಟ್ ತಂಡಕ್ಕೆ ಶ್ಲಾಘನೆ
ಈ ತಿಂಗಳು ನಮಗೆ ಕ್ರಿಕೆಟ್ನಲ್ಲಿ ಸಿಹಿ ಸುದ್ದಿ ಸಿಕ್ಕಿತು. ಆರಂಭದಲ್ಲಿ ಎಡವಿದ್ದ ಭಾರತ ಪುಟಿದೆದ್ದು, ಆಸ್ಟ್ರೇಲಿಯಾ ವಿರುದ್ಧದ ಕ್ರಿಕೆಟ್ ಸರಣಿಯನ್ನು ಗೆದ್ದಿತು. ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ಕಾರ್ಯವು ಸ್ಫೂರ್ತಿದಾಯಕವಾಗಿತ್ತು ಎಂದು ಭಾರತ ಕ್ರಿಕೆಟ್ ತಂಡವನ್ನು ಮೋದಿ ಶ್ಲಾಘಿಸಿದರು.
ಮೇಡ್ ಇನ್ ಇಂಡಿಯಾ ಲಸಿಕೆಗಳು ಸ್ವಾಭಿಮಾನದ ಸಂಕೇತ
ವ್ಯಾಕ್ಸಿನೇಷನ್ ಕಾರ್ಯಕ್ರಮದ ಮೂಲಕ ಭಾರತವು ಇತರರಿಗೆ ಸಹಾಯ ಮಾಡಲು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಏಕೆಂದರೆ ಇಂದು ಭಾರತವು ಔಷಧಿ ಮತ್ತು ಲಸಿಕೆಗಳ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿದೆ. ನಾವು ಕೇವಲ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಡೆಸುತ್ತಿಲ್ಲ, ಅತಿ ವೇಗವಾಗಿ ನಮ್ಮ ಜನರಿಗೆ ಲಸಿಕೆ ವಿತರಿಸುತ್ತಿದ್ದೇವೆ, ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸುತ್ತಿದ್ದೇವೆ.
ಮೇಡ್ ಇನ್ ಇಂಡಿಯಾ ಲಸಿಕೆಗಳು ಆತ್ಮನಿರ್ಭರ ಭಾರತದ ಸಂಕೇತ ಮಾತ್ರವಲ್ಲ, ಸ್ವಾಭಿಮಾನದ ಸಂಕೇತವಾಗಿದೆ. ಕೇವಲ 15 ದಿನಗಳಲ್ಲಿ ಭಾರತವು 30 ಲಕ್ಷಕ್ಕೂ ಹೆಚ್ಚು ಕೊರೊನಾ ವಾರಿಯರ್ಗಳಿಗೆ ಲಸಿಕೆ ನೀಡಿದೆ. ಕೊರೊನಾ ವಿರುದ್ಧದ ಭಾರತದ ಹೋರಾಟದಂತೆಯೇ ನಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮವೂ ಜಗತ್ತಿಗೆ ಒಂದು ಉದಾಹರಣೆಯಾಗುತ್ತಿದೆ ಎಂದು ಪ್ರಧಾನಿ ಹೆಮ್ಮೆ ವ್ಯಕ್ತಪಡಿಸಿದರು.
ರಸ್ತೆ ಸುರಕ್ಷತಾ ಮಾಸ
ಭಾರತವು ಜನವರಿ 18 ರಿಂದ ಫೆಬ್ರವರಿ 17 ರವರೆಗೆ 'ರಸ್ತೆ ಸುರಕ್ಷತಾ ಮಾಸ' ಅಭಿಯಾನವನ್ನು ಆಚರಿಸುತ್ತಿದೆ. ರಸ್ತೆ ಅಪಘಾತಗಳು ಎಲ್ಲರಿಗೂ ಆತಂಕದ ವಿಷಯವಾಗಿದೆ. ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ನಿರ್ಮಿಸಿದ ರಸ್ತೆಗಳ ಬದಿ 'ಇದು ಹೆದ್ದಾರಿ, ರನ್‌ವೇ ಅಲ್ಲ' ಎಂಬ ಘೋಷವಾಕ್ಯವನ್ನು ಸೂಚನಾ ಫಲಕಗಳಲ್ಲಿ ಬರೆದಿದೆ. ಇಂತಹ ಎಚ್ಚರಿಕೆಯ ಸಂದೇಶವುಳ್ಳ ಆಕರ್ಷಕ ವಾಕ್ಯಗಳನ್ನು ನೀವು ಕೂಡ 'MyGov' ಆ್ಯಪ್ನಲ್ಲಿ ಕಳುಹಿಸಬಹುದು ಎಂದು ಮೋದಿ ನೆಟಿಜನ್ಗಳಿಗೆ ಮಾಹಿತಿ ನೀಡಿದರು.
ಮಹಿಳಾ ಪೈಲಟ್‌ಗಳ ಸಾಧನೆಗೆ ಸಲಾಂ
ಕೆಲವು ದಿನಗಳ ಹಿಂದೆ ನಾಲ್ವರು ಭಾರತೀಯ ಮಹಿಳಾ ಪೈಲಟ್‌ಗಳು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನೇರ ವಿಮಾನ ಹಾರಾಟ ನಡೆಸಿದರು. 10,000 ಕಿ.ಮೀ ದೂರದ ವರೆಗೆ ಕ್ರಮಿಸಿರುವ ಈ ವಿಮಾನವು 225 ಜನರನ್ನು ಭಾರತಕ್ಕೆ ಕರೆತಂದಿತು. ಯಾವುದೇ ಕ್ಷೇತ್ರವಾಗಿರಲಿ, ನಮ್ಮ ದೇಶದ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ ಪ್ರಧಾನಿ ಮೋದಿ ಪೈಲಟ್‌ಗಳ ಕಾರ್ಯವನ್ನು ಕೊಂಡಾಡಿದರು.