ಮಥುರಾ (ಉತ್ತರ ಪ್ರದೇಶ): ಹಿಂದೂ ದೇವಾಲಯದ ಒಳಗೆ ನಮಾಜ್ ಅಥವಾ ಮುಸ್ಲಿಂ ಪ್ರಾರ್ಥನೆ ನಡೆದಿರುವುದು ರಾಜ್ಯದಲ್ಲಿ ತಳಮಳ ಸೃಷ್ಟಿಗೆ ಕಾರಣವಾಗಿದೆ ಎಂದು ಉತ್ತರ ಪ್ರದೇಶ ಸಚಿವ ಚೌಧರಿ ಲಕ್ಷ್ಮೀ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ವಾತಾವರಣವನ್ನು ಹಾಳುಮಾಡಲು ಇದೆಲ್ಲವನ್ನು ನಡೆಸಲಾಗುತ್ತಿದೆ. ಇದೆಲ್ಲದರ ಹಿಂದೆ ಒಂದು ರೀತಿಯ ಸಿದ್ಧಾಂತವೊಂದು ಹರಿದಾಡುತ್ತಿರುವ ವಾಸನೆ ಬರುತ್ತಿದೆ. ದೇವಾಲಯದೊಳಗೆ ಪ್ರವೇಶಿಸಬಾರದೆಂದು ಹೇಳಿದ್ದರೂ ಸಹ ನಾಲ್ವರು ಮುಸ್ಲಿಮರು ನಂದ್ ಬಾಬಾ ದೇವಾಲಯದ ಒಳಗೆ ನುಗ್ಗಿ ನಮಾಜ್ ಸಲ್ಲಿಸಿದ್ದಾನೆ. ಈ ಮೂಲಕ ಅವರು ಬಲಿಷ್ಠರು ಎಂಬುದನ್ನು ಸಾಬೀತುಪಡಿಸಲು ಮುಂದಾಗಿದ್ದಾರೆ ಎಂದು ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 29ರಂದು ದೇವಾಲಯದೊಳಗೆ ನಮಾಜ್ ಸಲ್ಲಿಸಿದ ಆರೋಪ ಹಿನ್ನೆಲೆಯಲ್ಲಿ ಫೈಸಲ್ ಖಾನ್ ಎಂಬಾತನನ್ನು ನವೆಂಬರ್ 2ರಂದು ಬಂಧಿಸಲಾಗಿತ್ತು. ಈ ವ್ಯಕ್ತಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟದಲ್ಲಿ ಭಾಗಿಯಾಗಿ, ಶಹೀನ್ ಬಾಘ್ ಹಾಗೂ ದೆಹಲಿಯ ಇತರ ಪ್ರದೇಶಗಳಲ್ಲಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದನು.
ದೆಹಲಿ ಮೂಲದ ಕುದಾಯಿ ಕಿದ್ಮತ್ಗಾರ್ ಎಂಬ ಸಂಘಟನೆಯೊಂದರ ಸ್ಥಾಪಕನಾಗಿರುವ ಫೈಸಲ್ ಖಾನ್ ವಿಚಾರವಾಗಿ ಪರ, ವಿರೋಧಗಳು ಕೇಳಿಬರುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಚೌಧರಿ ಲಕ್ಷ್ಮೀ ನಾರಾಯಣ್ ಸನಾತನ ಧರ್ಮದ ಅನುಯಾಯಿಯಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೆಣಕಲು ಫೈಸಲ್ ಖಾನ್ ಈ ದಾರಿ ಆಯ್ಕೆ ಮಾಡಿಕೊಂಡಿದ್ದಾನೆ ಎಂದಿರುವ ಅವರು ಇಂಥಹ ಪಿತೂರಿಗಳು ಉತ್ತರ ಪ್ರದೇಶದಲ್ಲಿ ನಡೆಯಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.