ಬೆಂಗಳೂರು : ಇದು ಡ್ರೋನ್ ಯುಗ.. ಎಲ್ಲೆಡೆಯೂ ಡ್ರೋನ್ಗಳ ಬಳಕೆ ತೀವ್ರವಾಗುತ್ತಿದೆ. ಭಾರತ ಪಾಕ್ ಗಡಿಯಲ್ಲಿ ಆಗಾಗ ಡ್ರೋನ್ಗಳು ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿದೆ. ಜನಸ್ನೇಹಿ ಚಟುವಟಿಕೆಗಳಿಗೆ ಬಳಕೆಯಾಗುವ ಡ್ರೋನ್ಗಳನ್ನು ಈಗ ಮತ್ತೊಂದು ಮಹತ್ಕಾರ್ಯಕ್ಕೆ ಬಳಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಸಿಎಸ್ಐಆರ್-ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR-Council of Scientific and Industrial Research) ಅಂಗಸಂಸ್ಥೆಯಾದ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ (NAL-National Aerospace Laboratories) ಇತ್ತೀಚೆಗೆ ಒಂದು ಡ್ರೋನ್ ಅನ್ನು ಕಂಡು ಹಿಡಿದಿದೆ. ಈ ಡ್ರೋನ್ ಮೂಲಕ ಕೋವಿಡ್ ವ್ಯಾಕ್ಸಿನ್ ಅನ್ನು ಸಾಗಿಸುವ ಪ್ರಯೋಗವನ್ನು ಯಶಸ್ವಿಯಾಗಿ ಪೂರೈಸಿದೆ.
ಮಧ್ಯಮ ವರ್ಗದ BVLOS ಮಲ್ಟಿಕಾಪ್ಟರ್ UAV ಮೂಲಕ ಸುಮಾರು 50 ಬಾಟಲಿಯಷ್ಟು ಕೋವಿಡ್ ವ್ಯಾಕ್ಸಿನ್ ಅನ್ನು ಸಾಗಿಸುವ ಪ್ರಯೋಗವನ್ನು ಬೆಂಗಳೂರು ಹೊರ ವಲಯದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಅದಕ್ಕೂ ಮುನ್ನ BVLOS ಮತ್ತು UAV ಎಂದರೇನು ಎಂಬುದನ್ನು ನೋಡೋಣ..
ಏನಿದು UAV ಮತ್ತು BVLOS?
UAV ಎಂದರೆ ಇಂಗ್ಲಿಷ್ನಲ್ಲಿ Unmanned aerial vehicle ಎಂದು ಅರ್ಥ. ಮಾನವರ ಅವಶ್ಯಕತೆ ಇಲ್ಲದೇ ಆಕಾಶಲ್ಲಿ ಚಲಿಸುವ ಸಾಮರ್ಥ್ಯವಿರುವ ಯಂತ್ರಗಳನ್ನು ಯುಎವಿ ಎಂದು ಕರೆಯಲಾಗುತ್ತದೆ. ಡ್ರೋನ್ಗಳು ಈ ಯುಎವಿಗಳ ಒಂದು ಭಾಗವಷ್ಟೇ..
ಇನ್ನು BVLOS ಅನ್ನು ವಿಸ್ತರಿಸಿ Beyond Visual Line of Sight ಎಂದು ಬರೆಯಲಾಗುತ್ತದೆ. ಇದರ ಅರ್ಥ ವ್ಯಕ್ತಿಯ ಸಾಮಾನ್ಯ ದೃಷ್ಟಿ ಸಾಮರ್ಥ್ಯಕ್ಕಿಂತ ದೂರದಲ್ಲಿ ಕಾರ್ಯಾಚರಣೆ ನಡೆಸಬಲ್ಲ ವಿಮಾನಗಳು ಅಥವಾ ಡ್ರೋನ್ಗಳು ಎಂದರ್ಥ. ಇಂಥಹ ಡ್ರೋನ್ಗಳನ್ನೇ ಈಗ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಯವರು ಅಭಿವೃದ್ದಿಪಡಿಸಿ, ಪರೀಕ್ಷಿಸಿದ್ದಾರೆ.
ಎನ್ಎಎಲ್ ಪ್ರಯೋಗ ಹೇಗಿತ್ತು.?
ಬೆಂಗಳೂರಿನ ಹೊರವಲಯದಲ್ಲಿರುವ ಚಂದ್ರಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಪ್ರಯೋಗ ನಡೆಸಲಾಗಿದೆ. ಬೆಳಗ್ಗೆ 9.53ಕ್ಕೆ ಚಂದ್ರಾಪುರದಿಂದ 50 ಕೋವಿಡ್ ವ್ಯಾಕ್ಸಿನ್ ಬಾಟೆಲ್ಗಳಿದ್ದ ಬಾಕ್ಸ್ ಅನ್ನು ಹಾರಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿಗೆ ಡ್ರೋನ್ನಲ್ಲಿ ಕೇವಲ 10 ನಿಮಿಷದಲ್ಲಿ ಸಾಗಾಟ ಮಾಡಲಾಗಿದೆ.
300 ಮೀಟರ್ ಎತ್ತರದಲ್ಲಿ ಹಾರಿದ ಡ್ರೋನ್, ಕೇವಲ 10 ನಿಮಿಷದಲ್ಲಿ ಏಳು ಕಿಲೋಮೀಟರ್ ತಲುಪಿಸಿದೆ. ಅದಕ್ಕಿಂತ ಮುಖ್ಯವಾಗಿ ಹಾರಗದ್ದೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್ ವ್ಯಾಕ್ಸಿನ್ ತಲುಪಿಸಿದ ಡ್ರೋನ್ ಮತ್ತೆ ವಾಪಸ್ಸಾಗಿದೆ. ಅಂದರೆ ಕೇವಲ 14 ನಿಮಿಷದಲ್ಲಿ 20 ಕಿಲೋಮೀಟರ್ ದೂರವನ್ನು ಡ್ರೋನ್ ತಲುಪಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೆಡಿಕಲ್ ಆಫೀಸರ್ ಡಾ. ಮನೀಷಾ ಸಾಮಾನ್ಯವಾಗಿ ರಸ್ತೆಯ ಮೂಲಕ ಚಂದ್ರಾಪುರದಿಂದ ಹಾರಗದ್ದೆಗೆ ವ್ಯಾಕ್ಸಿನ್ ತಲುಪಿಸಬೇಕಾದರೆ, 30ರಿಂದ 40 ನಿಮಿಷ ಬೇಕಾಗುತ್ತದೆ. ಈ ಡ್ರೋನ್ ವ್ಯಾಕ್ಸಿನ್ ಅತ್ಯಂತ ವೇಗವಾಗಿ ತಲುಪಿಸಲು ಸಹಕರಿಸುತ್ತದೆ ಎಂದಿದ್ದಾರೆ. ಡ್ರೋನ್ ಅಭಿವೃದ್ಧಿಪಡಿಸಿದ ತಂಡವನ್ನು ಸಿಐಎಸ್ಆರ್-ಎನ್ಎಲ್ (CSIR-NAL) ಮುಖ್ಯಸ್ಥ ಡಾ.ವಿ. ಸತ್ಯನಾರಾಯಣ ಮೂರ್ತಿ ಶ್ಲಾಘಿಸಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು 13ನೇ ಸೆಪ್ಟೆಂಬರ್ 2021ರಂದು BVLOS ಪ್ರಯೋಗಗಳನ್ನು ನಡೆಸಲು ಸಿಐಎಸ್ಆರ್-ಎನ್ಎಲ್ಗೆ ಷರತ್ತುಬದ್ಧ ಅನುಮತಿಯನ್ನು ನೀಡಿತ್ತು. ಈಗ ರೂಪಿಸಿರುವ ಡ್ರೋನ್ ಮೂಲಕ ಔಷಧ, ಆಹಾರ, ಅಂಚೆ, ಮಾನವ ಅಂಗಗಳನ್ನೂ ಸಾಗಿಸಬಹುದಾಗಿದೆ. ಇದಲ್ಲದೇ ರಕ್ಷಣಾ ವಲಯದಲ್ಲಿಯೂ ಈ ಡ್ರೋನ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: ಕರ್ನಾಟಕ ಬಿಟ್ಕಾಯಿನ್ ಹಗರಣದ ಬಗ್ಗೆ ಪಕ್ಷಪಾತರಹಿತ ತನಿಖೆ ನಡೆಯಬೇಕು : ಸುರ್ಜೇವಾಲಾ