ಪಶ್ಚಿಮ ಗೋದಾವರಿ(ಆಂಧ್ರಪ್ರದೇಶ): ಇಲ್ಲಿನ ಜಂಗಾರೆಡ್ಡಿಗುಡೆಂ ಎಂಬಲ್ಲಿ ಕೇವಲ ಎರಡು ದಿನಗಳ ಅಂತರದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.
ನಿಗೂಢ ರೀತಿಯಲ್ಲಿ ಮೃತಪಟ್ಟವರೆಲ್ಲ ವಾಂತಿ, ಬೇಧಿ ಹಾಗು ಹೊಟ್ಟೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಸಂತ್ರಸ್ತರು ತೀವ್ರವಾಗಿ ಅಸ್ವಸ್ಥರಾಗಿ ಮೃತಪಟ್ಟಿದ್ದು ಘಟನೆಗೆ ಕಲಬೆರಕೆ ಮದ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಇಲ್ಲಿಯವರೆಗೆ ಆರೋಗ್ಯವಾಗಿದ್ದವರು ಕೂಡಾ ಈಗ ಏಕಾಏಕಿ ಹೊಟ್ಟೆನೋವಿನಿಂದ ಬಳಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸ್ಥಳೀಯರಲ್ಲಿ ಭಾರಿ ಆತಂಕ ಹಾಗೂ ಭಯದ ವಾತಾವರಣವನ್ನೇ ನಿರ್ಮಿಸಿವೆ. ಸಾವಿಗೀಡಾದ ಸುಮಾರು 10 ಜನರು ಬುಟ್ಟಾಯಗುಡೆಂ ರಸ್ತೆಯ ಗಾಂಧಿಬೊಮ್ಮ ಸೆಂಟರ್ ಬೀದಿಯವರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಉಕ್ರೇನ್ನಿಂದ ಜಿಲ್ಲೆಯ 7 ವಿದ್ಯಾರ್ಥಿಗಳು ಸುರಕ್ಷಿತವಾಗಿ ವಾಪಸ್ : ಚಿಕ್ಕಮಗಳೂರು ಡಿಸಿ
ಮೃತಪಟ್ಟ ಜನರು ಹಲವು ವರ್ಷಗಳಿಂದ ಮದ್ಯ ಸೇವಿಸುತ್ತಿದ್ದರೂ ಈವರೆಗೂ ಯಾವುದೇ ರೀತಿಯ ಖಾಯಿಲೆಗೆ ತುತ್ತಾಗಿರಲಿಲ್ಲ. ಹಾಗಾಗಿ, ಕಲಬೆರಕೆಯಿಂದ ಇವರೆಲ್ಲಾ ಸಾವನ್ನಪ್ಪಿರುವ ಅನುಮಾನವಿದೆ ಎಂದು ಸಂತ್ರಸ್ತರ ಕುಟುಂಬಸ್ಥರು ಹೇಳುತ್ತಿದ್ದಾರೆ. ಸತ್ತವರಲ್ಲಿ ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಉಳಿದವರು 45 ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ.
ಈ ಘಟನೆ ಸಂಬಂಧ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಾಳಿ ನಡೆಸಿ ಸಾರಾಯಿ ತಯಾರಿಕಾ ಘಟಕಗಳನ್ನು ನಾಶ ಮಾಡುತ್ತಿದ್ದಾರೆ.