ತಿರುವನಂತಪುರಂ: ಕೇರಳದ ಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾದ ಕೋವಲಂನಲ್ಲಿ (Kovalam) ನಿಗೂಢ ರೋಗಕ್ಕೆ ಬೀದಿನಾಯಿಗಳು ಸಾವನ್ನಪ್ಪುತ್ತಿದ್ದು, ಇದು ಅಲ್ಲಿನ ಜನರಲ್ಲಿ ಆತಂಕ ಉಂಟುಮಾಡಿದೆ.
ಕಳೆದ ಒಂದು ವಾರದಲ್ಲಿ ಕೋವಲಂನಲ್ಲಿ 20ಕ್ಕೂ ಹೆಚ್ಚು ನಾಯಿಗಳು ಈ ನಿಗೂಢ ರೋಗಕ್ಕೆ ಸಾವನ್ನಪ್ಪಿವೆ. ಅಲ್ಲದೇ ಹಲವಾರು ನಾಯಿಗಳು ಅನಾರೋಗ್ಯಕ್ಕೀಡಾಗಿರುವುದು ಕಂಡುಬಂದಿದೆ.
ನಾಯಿಗಳು ಸಾವನ್ನಪ್ಪುವ ಮುನ್ನ ಉಸಿರಾಟದ ತೊಂದರೆ, ದೇಹದಲ್ಲಿ ನಡುಕದಂತಹ ರೋಗಲಕ್ಷಣಗಳನ್ನು ಹೊಂದಿರುತ್ತವೆ. ರೋಗಲಕ್ಷಣ ಕಾಣಿಸಿಕೊಂಡ ಎರಡೇ ದಿನದಲ್ಲಿ ನಾಯಿಗಳು ಸಾವಿಗೀಡಾಗುತ್ತಿರುವುದು ಆತಂಕದ ಸಂಗತಿಯಾಗಿದೆ.
ನಾಯಿಗಳ ಅಸ್ವಾಭಾವಿಕ ಸಾವಿಗೆ ಗಾಳಿಯ ಮೂಲಕ ಹರಡುವ ವೈರಸ್ ಕಾರಣ ಎಂದು ಪಶುಸಂಗೋಪನಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ 'ಕೆನೈನ್ ಡಿಸ್ಟೆಂಪರ್' ಎಂಬ ವೈರಸ್ನಿಂದ ಈ ರೋಗ ಹರಡಿದೆ. ಇದು ನಾಯಿಗಳಿಂದ ಮನುಷ್ಯನಿಗೆ ಹಬ್ಬುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಲಸಿಕೆಯ ಮೂಲಕ ಈ ಸೋಂಕನ್ನು ತಡೆಗಟ್ಟಬಹುದು. ಅಲ್ಲದೇ, ನಾಯಿಗಳಲ್ಲಿ ಅತಿ ಬೇಗ ಹರಡುವ ರೋಗ ಇದಾಗಿದೆ. ನರಿ ಮತ್ತು ತೋಳಗಳಲ್ಲಿ ಕೆನೈನ್ ಡಿಸ್ಟೆಂಪರ್ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.