ರಾಯಗಢ/ಭುವನೇಶ್ವರ (ಒಡಿಶಾ): ರಷ್ಯಾದ ಇಬ್ಬರು ಜನಪ್ರತಿನಿಧಿಗಳು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪ್ರವಾಸಕ್ಕೆಂದು ಬಂದಿದ್ದ ಇವರು ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದು, ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.
ರಷ್ಯಾದ ಸಂಸದ, ಯಶಸ್ವಿ ಉದ್ಯಮಿ ಪಾವೆಲ್ ಆಂಟೊವ್ (65) ಮತ್ತು ವ್ಲಾಡಿಮಿರ್ ಬುಡಾನೋವ್ (61) ಮೃತರಂದು ಗುರುತಿಸಲಾಗಿದೆ. ವ್ಲಾಡಿಮಿರ್ ಮತ್ತು ಪಾವೆಲ್ ಸೇರಿದಂತೆ ನಾಲ್ವರು ರಷ್ಯಾದಿಂದ ಡಿಸೆಂಬರ್ 21ರಂದು ಒಡಿಶಾಗೆ ಬಂದಿದ್ದರು. ರಷ್ಯಾದ ಕೋಟ್ಯಧಿಪತಿ ಪಾವೆಲ್ ಆಂಟೊವ್ ತಮ್ಮ 65ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.
ಕಂಧಮಾಲ್ ಜಿಲ್ಲೆಯ ದರಿಂಗ್‌ಬಾಡಿಗೆ ಭೇಟಿ ನೀಡಿ, ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದರು. ಆದರೆ, ಮರುದಿನ ಎಂದರೆ ಡಿ.22ರಂದು ಬೆಳಗ್ಗೆ ವ್ಲಾಡಿಮಿರ್ ಮೃತಪಟ್ಟಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ ತಿಳಿಸಿದ್ದಾರೆ.
ಖಿನ್ನತೆಯಿಂದ ಪಾವೆಲ್ ಆತ್ಮಹತ್ಯೆ?: ಸಹೋದ್ಯೋಗಿ ವ್ಲಾಡಿಮಿರ್ ಬುಡಾನೋವ್ ಅವರ ಸಾವಿನ ನಂತರ ಪಾವೆಲ್ ಆಂಟೊವ್ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಮೂರನೇ ಮಹಡಿಯ ಹೋಟೆಲ್ ಕಿಟಕಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಎಸ್ಪಿ ಹೇಳಿದ್ದಾರೆ. ಅಲ್ಲದೇ, ಪಾವೆಲ್ ಕುಟುಂಬದ ಅನುಮತಿ ಪಡೆದು ಅಧಿಕಾರಿಗಳು ಸೋಮವಾರ ಅವರ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಅನುಮಾನಕ್ಕೆ ಕಾರಣವಾದ ಸಾವು ಪ್ರಕರಣ: ರಷ್ಯಾದಿಂದ ಬಂದ ಬಳಿಕ ಹೋಟೆಲ್‌ನಲ್ಲಿ ನಾಲ್ವರು ಕೂಡ ಉಳಿದುಕೊಂಡಿದ್ದರು. ಇದರಲ್ಲಿ 61 ವರ್ಷದ ವ್ಲಾಡಿಮಿರ್ ಅನಾರೋಗ್ಯದಿಂದ ಬಳಲುತ್ತಿದ್ದರು. ಮರುದಿನ (ಡಿ.22) ಬೆಳಿಗ್ಗೆ ಹೋಟೆಲ್ ಕೋಣೆಗೆ ಭೇಟಿ ನೀಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತ್ತು. ಆದ್ದರಿಂದ ತಕ್ಷಣವೇ ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆವು ಎಂದು ಪ್ರವಾಸಿ ಮಾರ್ಗದರ್ಶಕ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮಿತಿಮೀರಿದ ಮದ್ಯ ಸೇವನೆಯಿಂದ ವ್ಲಾಡಿಮಿರ್ ಸಾವನ್ನಪ್ಪಿರುವ ಬಗ್ಗೆ ಮೊದಲಿಗೆ ಅನುಮಾನ ವ್ಯಕ್ತವಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ಹೃದಯ ಸಮಸ್ಯೆಯಿಂದ ಸಾವನ್ನಪ್ಪಿರುವ ಖಚಿತವಾಗಿದೆ.
ಮತ್ತೊಂದೆಡೆ, ಆ.24ರಂದು ಪಾವೆಲ್ ಆಂಟೊವ್ ತಾವು ತಂಗಿದ್ದ ಹೋಟೆಲ್ ಕೊಠಡಿಯಲ್ಲಿ ಇರಲಿಲ್ಲ. ಆದ್ದರಿಂದ ಹೋಟೆಲ್ ಸಿಬ್ಬಂದಿ ಹೋಟೆಲ್‌ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಅವರು ಹೋಟೆಲ್ ಸಮೀಪದ ನಿರ್ಮಾಣ ಹಂತದ ಕಟ್ಟಡದ ಕೆಳಗೆ ಬಿದ್ದಿರುವುದು ಕಂಡುಬಂತು. ಈ ಸಮಯದಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಮೃತರಿಬ್ಬರನ್ನು ಬೇರೆ ಯಾರೂ ಭೇಟಿ ಮಾಡಿರಲಿಲ್ಲ. ಅವರ ಭಾಷೆಯೂ ನಮಗೆ ಗೊತ್ತಿಲ್ಲ ಎಂದು ಹೋಟೆಲ್ ಮ್ಯಾನೇಜರ್ ಹೇಳಿದ್ದಾರೆ.
ಪಾವೆಲ್ ಸಾವು ಘೋಷಿಸಿದ ರಷ್ಯಾ ಸಂಸತ್: ಪಾವೆಲ್ ಆಂಟೊವ್ ಸಾವಿನ ಬಗ್ಗೆ ರಷ್ಯಾದ ಪ್ರಾದೇಶಿಕ ಸಂಸತ್ತಿನ ಉಪಾಧ್ಯಕ್ಷ ವ್ಯಾಚೆಸ್ಲಾವ್ ಕಾರ್ತುಖಿನ್ ಅಧಿಕೃತವಾಗಿ ಘೋಷಿಸಿದ್ದಾರೆ. ನಮ್ಮ ಸಹೋದ್ಯೋಗಿ, ಯಶಸ್ವಿ ಉದ್ಯಮಿ ಪಾವೆಲ್ ಆಂಟೊವ್ ನಿಧನರಾದರು. ಯುನೈಟೆಡ್ ರಷ್ಯಾ ಬಣದ ಪ್ರತಿನಿಧಿಗಳ ಪರವಾಗಿ ನಾನು ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಉಪಾಧ್ಯಕ್ಷರು ತಿಳಿಸಿದ್ದಾರೆ ಎಂದು ಸಂಸತ್ತಿನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಈ ಕುರಿತು ಒಡಿಶಾ ಪೊಲೀಸ್ ಮಹಾನಿರ್ದೇಶಕ ಸುನಿಲ್ ಫುಲಾಲ್ ಪ್ರತಿಕ್ರಿಯಿಸಿದ್ದು, ಇಬ್ಬರು ರಷ್ಯಾ ಪ್ರವಾಸಿಗರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಹೆಚ್ಚಿನ ತನಿಖೆಗೆ ಸಹಕರಿಸುವಂತೆ ರಾಜ್ಯ ಸಿಐಡಿ ಅಪರಾಧ ವಿಭಾಗದ ಪ್ರಧಾನ ಕಚೇರಿಗೂ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ, ನಾವು ಕೋಲ್ಕತ್ತಾದಲ್ಲಿರುವ ಕಾನ್ಸುಲೇಟ್ ಕಚೇರಿಯೊಂದಿಗೂ ಸಂಪರ್ಕದಲ್ಲಿದ್ದೇವೆ. ಅವರೂ ತನಿಖೆಗೆ ಸಹಕರಿಸುತ್ತಿದ್ದಾರೆ. ಮತ್ತೊಂದೆಡೆ, ಮತ್ತಿಬ್ಬರು ಪ್ರವಾಸಿಗರಾದ ತುರೊವ್ ಮಿಖಾಯಿಲ್ ಮತ್ತು ಪನಾಸೆಂಕೊ ನಟಾಲಿಯಾ ಅವರನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ರಾಯಗಢ ಮೂಲಕ ಭುವನೇಶ್ವರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ