ಮುಂಬೈ: ಪತ್ರಾ ಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಶಿವಸೇನೆ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿದ ರಾವತ್ ಅವರಿಗೆ ಮುಂಬೈನ ವಿಶೇಷ ನ್ಯಾಯಾಲಯವು ಬುಧವಾರ ಜಾಮೀನು ಮಂಜೂರು ಮಾಡಿದ್ದು, ಅವರ ಬಂಧನ ಕಾನೂನುಬಾಹಿರ ಆಗಿತ್ತು ಎಂದಿದೆ.
ನನ್ನ ಬಂಧನಕ್ಕೆ ರಾಜಕೀಯ ಪಿತೂರಿ ಕಾರಣ: ಈ ಪ್ರಕರಣದಲ್ಲಿ, 100 ದಿನಗಳ ನಂತರ ಬುಧವಾರ ಮುಂಬೈನ ಆರ್ಥರ್ ರೋಡ್ ಜೈಲಿನಿಂದ ಬಿಡುಗಡೆಯಾದ ರಾವತ್ ಅವರು ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಬಂಧನಕ್ಕೆ ರಾಜಕೀಯ ಪಿತೂರಿ ಕಾರಣ. ಈ ರೀತಿಯ ಸೇಡಿನ ರಾಜಕೀಯವನ್ನು ನಾನು ದೇಶದಲ್ಲಿ ಕಂಡಿರಲಿಲ್ಲ. ಜೊತೆಗೆ ಶೀಘ್ರದಲ್ಲೇ ತಮ್ಮ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡುವುದಾಗಿ ಅವರು ತಿಳಿಸಿದರು.
ಇದೇ ವೇಳೆ ಮಾತನಾಡಿದ ಅವರು, 'ಸಾವರ್ಕರ್ ಮತ್ತು ತಿಲಕರಂತೆ ನಾನೂ ಏಕಾಂತದಲ್ಲಿದ್ದೆ. ನನ್ನ ಬಂಧನವೂ ರಾಜಕೀಯ ಪಿತೂರಿಯಾಗಿದೆ, ನಾನು ನನ್ನ ಸಮಯವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿದ್ದೇನೆ. ನನ್ನ ಕುಟುಂಬ ಸಾಕಷ್ಟು ಕಳೆದುಕೊಂಡಿದೆ. ನಾನು ನನ್ನ ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ. ನಮ್ಮ ದೇಶವು 150 ವರ್ಷಗಳ ಕಾಲ ಪರಕೀಯರ ಆಳ್ವಿಕೆಯಲ್ಲಿತ್ತು, ಆದರೂ ಈ ರೀತಿಯ ರಾಜಕೀಯ ದ್ವೇಷವನ್ನು ನಾವು ಎಂದು ಕಂಡಿರಲಿಲ್ಲ. ಹೊಸ ಸರ್ಕಾರವು ಕೆಲವು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹಾಗೆ ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡ ಭೇಟಿ ಮಾಡಲಿದ್ದೇನೆ' ಎಂದ ರಾವತ್ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ಇದನ್ನೂ ಓದಿ: ಜೆಡಿಎಸ್‌ನಿಂದ 'ಘರ್ ವಾಪಸಿ' ಪ್ರಯತ್ನ: ಮತ್ತೆ ಪಕ್ಷಕ್ಕೆ ಬರ್ತಾರಾ ಉಚ್ಛಾಟಿತ ಶಾಸಕ ಶ್ರೀನಿವಾಸ್?