ಮುಜಾಫ್ಫರ್‌ಪುರ (ಬಿಹಾರ): ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಇಬ್ಬರು ಪ್ರೇಮಿಗಳ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ. ಬಿಹಾರದ ಮುಜಾಫರ್‌ಪುರದಲ್ಲಿ ನೇಣು ಬಿಗಿದುಕೊಂಡು ಗೆಳತಿ ಆತ್ಮಹತ್ಯೆ ಮಾಡಿದ್ದಾಳೆ. ಈ ವಿಷಯ ತಿಳಿದ ಪ್ರಿಯಕರ ಜೈಪುರದಲ್ಲಿ 8ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿದ್ದಾನೆ.
ಮುಜಾಫರ್‌ಪುರದ 23 ವರ್ಷದ ಅಂಜಲಿ ಮತ್ತು ಜೈಪುರದಲ್ಲಿ ನೆಲೆಸಿದ್ದ ವಿವೇಕ್ ಎಂಬುವವರೇ ಮೃತ ಪ್ರೇಮಿಗಳು. ಇಬ್ಬರೂ 8ನೇ ತರಗತಿಯಿಂದ ಒಟ್ಟಿಗೆ ಓದಿ ಸ್ನೇಹಿತರಾಗಿದ್ದರು. ನಂತರ ಇಬ್ಬರ ನಡುವೆಯೂ ಪ್ರೇಮಾಂಕುರವಾಗಿತ್ತು. ಪರಸ್ಪರ ಸಂಬಂಧ ಕೂಡ ಹೊಂದಿದ್ದರು ಎನ್ನಲಾಗಿದೆ.
ಜಗಳದಿಂದ ಆತ್ಮಹತ್ಯೆಯವರೆಗೆ..: ಮೃತ ಅಂಜಲಿ ಚಾರ್ಟೆಡ್ ಅಕೌಂಟೆಂಟ್ (ಸಿಎ) ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಕಳೆದ ಬುಧವಾರ ರಾತ್ರಿ ವಿವೇಕ್ ಜತೆ ಫೋನ್ನಲ್ಲಿ ಮಾತನಾಡುತ್ತಲೇ ಯಾವುದೋ ಕಾರಣಕ್ಕೆ ಜಗಳ ಆರಂಭವಾಗಿದೆ. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿದೆ. ಇದಾದ ನಂತರವೇ ಅಂದು ರಾತ್ರಿಯೇ ಅಂಜಲಿ ತನ್ನ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗುರುವಾರ ಬೆಳಗ್ಗೆ ಕುಟುಂಬದವರು ಎಂದಿನಂತೆ ಅಂಜಲಿಯ ಕೋಣೆ ತೆರೆಯಲು ಹೋಗಿದ್ದಾರೆ. ಬಾಗಿಲು ಬಡಿದು ಮತ್ತು ಮೊಬೈಲ್ಗೆ ಕರೆ ಮಾಡಿ ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆದರೆ, ಕೋಣೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಕಿಟಕಿಯಿಂದ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಅಂತೆಯೇ, ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಆಗ ದುಪಟ್ಟಾದಿಂದ ಅಂಜಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ನಂತರ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪೊಲೀಸರು ರವಾನಿಸಿದ್ದಾರೆ.
ಕಾನ್ಫರೆನ್ಸ್ ಕಾಲ್ನಲ್ಲಿದ್ದ ಸ್ನೇಹಿತ: ಅಂಜಲಿ ಮತ್ತು ವಿವೇಕ್ ಫೋನ್ನಲ್ಲಿ ಮಾತನಾಡುತ್ತಿದ್ದ ವೇಳೆ ತಮ್ಮ ಮತ್ತೊಬ್ಬ ಸ್ನೇಹಿತನನ್ನು ಕಾನ್ಫರೆನ್ಸ್ ಕಾಲ್ನಲ್ಲಿ ತೆಗೆದುಕೊಂಡಿದ್ದರು. ಆಗ ಇಬ್ಬರನ್ನು ಆತ ಸಮಾಧಾನ ಪಡಿಸಲು ಯತ್ನಿಸಿದ್ದ. ಆರಂಭದಲ್ಲಿ ಆತ ಎಷ್ಟೇ ಹೇಳಿದರೂ ಇಬ್ಬರೂ ಕೇಳಿರಲಿಲ್ಲ. ಬಳಿಕ ಅಂಜಲಿ-ವಿವೇಕ್ ಶಾಂತವಾಗಿದ್ದರು. ಆದರೆ, ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿದಾಗ ವಿವೇಕ್ ಕರೆ ಸ್ವೀಕರಿಸಿರಲಿಲ್ಲ ಎನ್ನಲಾಗಿದೆ.
ಅಲ್ಲದೇ, ವಿವೇಕ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಇದಾದ ನಂತರವೇ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇತ್ತ, ಅಂಜಲಿ ಆತ್ಮಹತ್ಯೆ ನಂತರ ಈಕೆ ಅಣ್ಣಗೆ ರಾತ್ರಿ ನಡೆದ ವಿಷಯ ಗೊತ್ತಾಗಿದೆ. ಆದ್ದರಿಂದ ಅಂಜಲಿ ಅಣ್ಣ ವಿವೇಕ್ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ಇದರಿಂದ ಜೈಪುರದಲ್ಲಿದ್ದ ವಿವೇಕ್ 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಕುಟುಂಬಗಳ ಪರಸ್ಪರ ಆರೋಪ: ಇಬ್ಬರ ಆತ್ಮಹತ್ಯೆ ನಂತರ ಅಂಜಲಿ ಮತ್ತು ವಿವೇಕ್ ಕುಟುಂಬಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ವಿವೇಕ್ ಕಿರುಕುಳದಿಂದಲೇ ಅಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ದೂರಿದ್ದಾರೆ. ಇತ್ತ, ಅಂಜಲಿ ಅಣ್ಣ ಕರೆ ಮಾಡಿ ಬೆದರಿಕೆ ಹಾಕಿದ್ದರಿಂದ ವಿವೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಪಾಲಕರು ಆರೋಪಿಸಿದ್ದಾರೆ. ಸದ್ಯ ರಾಜಸ್ಥಾನ ಮತ್ತು ಬಿಹಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 2 ಜೋಡಿ ನಡುವೆ ಪರಸ್ಪರ ವಿನಿಮಯ.. ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ ಒಬ್ಬಳ ಪತಿ!